Slide 1 Slide 2 Slide 3 Slide 4 Slide 5 Slide 6 Slide 7




ಸುದ್ದಿ  
 
 
 
- ಪ್ರೊ. ಅಂಬಳಿಕೆ ಹಿರಿಯಣ್ಣ
 
     
 

ಕರ್ನಾಟಕ ಅಮೂಲ್ಯ ಹಾಗೂ ಸಮೃದ್ಧ ಜಾನಪದ ಸಂಪತ್ತಿನ ಆಗರವಾಗಿದೆ. ಈ ಜ್ಞಾನದ ಅನನ್ಯತೆಯನ್ನು ಶೋಧಿಸುವ, ಸಂರಕ್ಷಿಸುವ ಹಾಗೂ ಸಂವರ್ಧನೆಯ ಕಾರ್ಯವನ್ನು ನಿರ್ವಹಿಸುವ ಉದ್ದೇಶಕ್ಕಾಗಿ, ಅನಂತ ವೈವಿಧ್ಯದ ಈ ಜ್ಞಾನದ ಸಂಗ್ರಹ, ಸಂಪಾದನೆ, ಕಲಿಕೆ, ಪ್ರದರ್ಶನ ಕಾರ್ಯಗಳನ್ನು ಇನ್ನೂ ತೀವ್ರಗತಿಯಲ್ಲಿ ಪ್ರಮಾಣಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸುವ ಉದ್ದೇಶಕ್ಕಾಗಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅಗತ್ಯವಿತ್ತು. ಸಮಗ್ರ ಸರ್ವೇಕ್ಷಣೆ ಹಾಗೂ ದಾಖಲೀಕರಣದ ಜೊತೆಯಲ್ಲಿ ನಾಡವರ ಅಪ್ರತಿಮ ಕಲಾ ಪ್ರತಿಭೆ ಮತ್ತು ಕೌಶಲ್ಯವನ್ನು ತೆರೆದಿಡುವ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯ ಪರಿಶೋಧನ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ. ಬಹುಭಾಷಿಕ ಹಾಗೂ ಬಹುಸಂಸ್ಕೃತಿಗಳ ಈ ನಾಡಿನಲ್ಲಿ ಇನ್ನೂ ಅನಾವರಣಗೊಳ್ಳದ ಜ್ಞಾನ ಸಂಪತ್ತು ಅಗಾಧವಾಗಿದೆ. ಇಂತಹ ಸಂದರ್ಭದಲ್ಲಿ ನೆಲದ ಸಂಸ್ಕೃತಿಯನ್ನು ಬದುಕುತ್ತಿರುವ ನಾಡಿನ ಸಮಸ್ತರ ಒಲವು ಮತ್ತು ನಿರೀಕ್ಷೆ ಅಪಾರವಾದುದೇ ಆಗಿದೆ.


ನಾಡಿನ ಜನತೆಯ ನರನಾಡಿಯನ್ನು ಬಲ್ಲವರಾಗಿದ್ದ, ಗ್ರಾಮೀಣ ಬದುಕು ಹಸನಾಗಬೇಕು ಎಂದು ಹಂಬಲಿಸುತ್ತಿದ್ದ ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ದಿವಂಗತ ಅಬ್ದುಲ್ ನಜೀರ್ ಸಾಬ್ ಅವರ ನಿರ್ದೇಶನದ ಮೇರೆಗೆ ಜಾನಪದ ತಜ್ಞ ದಿವಂಗತ ಜೀ.ಶಂ. ಪರಮಶಿವಯ್ಯ ಅವರು ಜಾನಪದ ಸಂರಕ್ಷಣೆ ಹಾಗೂ ಸಂವರ್ಧನೆ ಹೇಗೆ ಎಂಬ ವಿಚಾರಗಳನ್ನೊಳಗೊಂಡ ಒಂದು ಪ್ರಸ್ತಾವನೆಯನ್ನು ಸಿದ್ಧಪಡಿಸಿ 1988 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆ ಪ್ರಸ್ತಾವನೆಯಲ್ಲಿ ಜಾನಪದ ವಿಶ್ವವಿದ್ಯಾಲಯದ ಆವಶ್ಯಕತೆಯನ್ನು ಮೊದಲ ಬಾರಿಗೆ ಮಂಡಿಸಲಾಗಿತ್ತು. ಜೀಶಂಪ ಕಂಡ ಕನಸು ಶ್ರೀ ಗೊ. ರು. ಚನ್ನಬಸಪ್ಪನವರ ಮುಂದಾಳತ್ವದಲ್ಲಿ ಪ್ರೊ. ದೇಜಗೌ, ಪ್ರೊ. ಚಂದ್ರಶೇಖರ ಕಂಬಾರ, ದಿ. ಜಿ. ನಾರಾಯಣ, ಟಿ.ಕೆಂಪಹನುಮಯ್ಯ, ಡಿ.ಲಿಂಗಯ್ಯ, ಮುಖ್ಯಮಂತ್ರಿ ಚಂದ್ರು ಇನ್ನು ಮುಂತಾದವರ ಪ್ರಯತ್ನದಿಂದ ನನಸಾಗುವ ದಾರಿ ಹಿಡಿದದ್ದು ಸಂತೋಷದ ಸಂಗತಿ.


ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಜಾನಪದ ಸಂರಕ್ಷಣೆ, ಸಂವರ್ಧನೆ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿದ್ವಾಂಸರು ತಳೆದ ಆಸ್ಥೆ-ಆಸಕ್ತಿ ಹಾಗೂ ಕರ್ನಾಟಕದಲ್ಲಿ ನಡೆಯುತ್ತಾ ಬಂದಿರುವ ಜಾನಪದ ಸಂಬಂಧವಾದ ಚಟುವಟಿಕೆಗಳನ್ನು ನಿಕಟವಾಗಿ ಬಲ್ಲ ಸನ್ಮಾನ್ಯ ಶ್ರೀ ಗೊ.ರು. ಚನ್ನಬಸಪ್ಪನವರು ಜಾನಪದಕ್ಕೇ ಮೀಸಲಾದ ಏಕಶಿಸ್ತೀಯ ವಿಶ್ವವಿದ್ಯಾಲಯವೊಂದು ಜರೂರಾಗಿ ಸ್ಥಾಪನೆಯಾಗಬೇಕಾದ ಅಗತ್ಯವನ್ನು ಮನಗಂಡು ಸರ್ಕಾರಕ್ಕೆ ದಿನಾಂಕ 18.05.2009 ರಂದು ಅಧಿಕೃತವಾದ ಪ್ರಸ್ತಾವನೆಯೊಂದನ್ನು ಸಲ್ಲಿಸಿದರು. ಕರ್ನಾಟಕ ಜಾನಪದ ಅಕಾಡೆಮಿಯ ಆಶ್ರಯದಲ್ಲಿ ಜಾನಪದ ತಜ್ಞರ ಸಭೆಯೊಂದನ್ನು ಆಯೋಜಿಸಿ ವಿಶ್ವವಿದ್ಯಾಲಯದ ಸ್ಥಾಪನೆ ಜರೂರಾಗಿ ಅಗತ್ಯವಾಗಿ ಆಗಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿ ಸರ್ಕಾರಕ್ಕೆ ಅದನ್ನು ದಿನಾಂಕ 23.07.2009 ರಂದು ಸಲ್ಲಿಸಲಾಯಿತು. ಅದಕ್ಕೆ ಸ್ಪಂದಿಸಿದ ಸರ್ಕಾರ 22.12.2009 ರಂದು ಜಾನಪದ ತಜ್ಞರೊಡನೆ ಸಮಾಲೋಚನೆ ನಡೆಸಿ ಸಭೆಯ ನಿರ್ಣಯಗಳನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದಿತು.


ಈ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರ ಕನಸಿನ ಕೂಸಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವಿರ್ಭಾವವಾಯಿತು. 2010 ರ ಸೆಪ್ಟೆಂಬರ್ 28 ರಂದು ಜಾನಪದ ವಿಶ್ವವಿದ್ಯಾಲಯ ಸ್ಥಾಪನಾ ಘೋಷಣೆಯೊಂದಿಗೆ ವಿಶೇಷಾಧಿಕಾರಿಯನ್ನು ನೇಮಿಸಲಾಯಿತು.


ವಿಶೇಷಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡ ಮೇಲೆ ಜಾನಪದ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನಕ್ಕಾಗಿ ಮಧ್ಯ ಕರ್ನಾಟಕ ಪರಿಸರದಲ್ಲಿ ಸ್ಥಳ ಪರಿವೀಕ್ಷಣ ಕಾರ್ಯ ಕೈಗೊಳ್ಳಲಾಯಿತು. ಈ ಸ್ಥಳ ಪರಿಶೀಲನಾಕಾರ್ಯ ಕರ್ನಾಟಕ ಜಾನಪದ ಅಕಾಡೆಮಿಯ ಆಗಿನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗೊ. ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಪ್ರೊ. ಎಂ. ಎಂ. ಕಲಬುರ್ಗಿ, ಡಾ. ಸಿ. ವೀರಣ್ಣ, ಡಾ. ಬಸವರಾಜ ಮಲಸೆಟ್ಟಿ ಹಾಗೂ ಡಾ. ರಾಮು ಮೂಲಗಿ ಅವರು ಸೇರಿಕೊಂಡ ತಂಡದಿಂದ ನಡೆಯಿತು. ಜಾನಪದ ಮತ್ತು ನಿಸರ್ಗಕ್ಕೆ ಇರುವ ನಿಕಟ ಸಂಬಂಧವನ್ನು ಲಕ್ಷ್ಯದಲ್ಲಿಟ್ಟುಕೊಂಡು ಸ್ಥಳಗಳನ್ನು ಪರಿಶೀಲಿಸಲಾಯಿತು. ಅಂತರ್ಜಲ, ರಾಷ್ಟ್ರೀಯ ಹೆದ್ದಾರಿ, ರೈಲು, ವಿಮಾನಯಾನ ಸೌಲಭ್ಯವಿರುವ ಗೊಟಗೋಡಿ ಎಂಬ ಸ್ಥಳವನ್ನು ಗುರುತಿಸಲಾಯಿತು. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ರಾಷ್ಟ್ರೀಯ ಹೆದ್ದಾರಿ - 4ಕ್ಕೆ ಹೊಂದಿಕೊಂಡಂತಿರುವ ಸುಂದರ ಕೆರೆ-ಕಿರುಗುಡ್ಡ ತಪ್ಪಲುಗಳಿಂದ ಆವೃತವಾದ ನಿಸರ್ಗ ರಮ್ಯತಾಣ ಇದು. ರಸ್ತೆ, ರೈಲು, ವಿಮಾನ ಸಂಪರ್ಕಕ್ಕೆ ಈ ಸ್ಥಳ ಅನುಕೂಲಕರವಾಗಿದೆ. ಇದು ಮಧ್ಯಕರ್ನಾಟಕದ ತಾಣದಲ್ಲೇ ಇರುವುದು ಈ ಸ್ಥಳದ ಆಯ್ಕೆಗೆ ಪುಷ್ಟಿ ನೀಡಿದೆ.


ಕೈಗಾರಿಕೀಕರಣ, ಉದಾರೀಕರಣ ಹಾಗೂ ಜಾಗತೀಕರಣದ ಅಬ್ಬರದಲ್ಲಿ ಗ್ರಾಮೀಣ ಹಾಗೂ ಗುಡ್ಡಗಾಡು ಜನರ ಮೂಲ ಬದುಕೇ ಹದಗೆಡುತ್ತಿರುವ ಈ ಸಂದಿಗ್ಧ ಸನ್ನಿವೇಶದಲ್ಲಿ ನಮ್ಮ ಪಾರಂಪರಿಕ ಜ್ಞಾನಪದ್ಧತಿಗಳ ಸತ್ವ ಮತ್ತು ಮೌಲ್ಯವನ್ನು ಹೊಸ ತಲೆಮಾರಿಗೆ ಮನಗಾಣಿಸಿಕೊಡುವುದರೊಂದಿಗೆ ಅದನ್ನು ಇವತ್ತಿನ ಬದುಕಿಗೆ ಹೊಂದಿಸುವ ಪ್ರಯತ್ನ ತುರ್ತಾಗಿ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಗೊ. ರು. ಚನ್ನಬಸಪ್ಪನವರ ನೇತೃತ್ವದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ ಕೈಗೊಳ್ಳುವಂತೆ ಮಾಡಿದ್ದು ಇತಿಹಾಸ. ಆಗಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಂಬಿಡದೆ ಅನುಸರಿಸಿ ಮನವೊಲಿಸಿದವರು ಶ್ರೀ ಗೊ.ರು.ಚ. ಮತ್ತು ಅವರ ಪಡೆ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಗೊಟಗೋಡಿಯಲ್ಲಿ ವಿಶ್ವವಿದ್ಯಾಲಯ ಅಸ್ತಿತ್ವ ಹೊಂದಲು ಒತ್ತಾಸೆ ನೀಡಿದವರು ಆಗಿನ ಮಾನ್ಯ ಸಚಿವದ್ವಯರಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಶ್ರೀ ಸಿ. ಎಂ. ಉದಾಸಿ ಅವರು. ವಿಶ್ವವಿದ್ಯಾಲಯದ ಸ್ಥಾಪನಾ ಪ್ರಕ್ರಿಯೆ ಆರಂಭಗೊಂಡಂದಿನಿಂದ ಅದರ ಉದ್ಘಾಟನಾ ದಿನದವರೆಗೂ ಶ್ರೀ ಬೊಮ್ಮಾಯಿ ಅವರು ವಹಿಸಿದ ಕಾಳಜಿ ಉಲ್ಲೇಖಾರ್ಹ. ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಭೂಮಿಯನ್ನು ದೊರಕಿಸಿಕೊಡುವಲ್ಲಿ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರ ಪಾತ್ರ ಹಿರಿದಾದುದು. ತಮ್ಮ ಸ್ವಕ್ಷೇತ್ರದಲ್ಲಿ ರೂಪುಗೊಂಡ ಈ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು ಎಂಬುದು ಅವರ ಹೆಬ್ಬಯಕೆ. ಇಲ್ಲಿ ನೆನಪಿಸಿಕೊಳ್ಳಬೇಕಾದ ಇನ್ನಿಬ್ಬರು ಪ್ರಮುಖರೆಂದರೆ ಜಾನಪದ ತಜ್ಞರ ಸಮಾಲೋಚನೆ ಸಭೆ ಜರುಗಿಸಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಭೂಮಿಕೆ ರೂಪಿಸಿದ ಆಗಿನ ಶಿಕ್ಷಣ ಸಚಿವ ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಹಾಗೂ ಸರಳ ಸಜ್ಜನಿಕೆಯ ಸಚಿವ ದಿವಂಗತ ಡಾ. ವಿ. ಎಸ್. ಆಚಾರ್ಯ ಅವರು. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಂದ ಭಿನ್ನಾವಾಗಿ ವಿಶಿಷ್ಟವಾಗಿ ವಿಶ್ವವಿದ್ಯಾಲಯವನ್ನು ರೂಪಿಸುವ ಕನಸು ಕಟ್ಟಿ ವಿಶ್ವವಿದ್ಯಾಲಯ ಸ್ಥಾಪನಾ ಪ್ರಕ್ರಿಯೆಗೆ ತೀವ್ರ ಚಾಲನೆ ದೊರಕಿಸಿಕೊಟ್ಟವರು ಅವರು.


ಒಟ್ಟಿನಲ್ಲಿ ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ಜಾನಪದಕ್ಕಾಗಿಯೇ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕ ಸರ್ಕಾರದ್ದು. ಈ ವಿಶ್ವವಿದ್ಯಾಲಯ ಸಂಗೀತ, ಸಂಸ್ಕೃತ ಇವೇ ಮುಂತಾದ 'ವಿಷಯ' ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಇವತ್ತಿನ ಸೇರ್ಪಡೆ. ಸಮುದಾಯ ಜ್ಞಾನದ ಮಹತ್ವವನ್ನು ಮನಗಂಡು ಸರ್ಕಾರ ಜಾನಪದ ವಿಷಯಕ್ಕೇ ಮೀಸಲಾದ ಸ್ವತಂತ್ರ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವುದರ ಮೂಲಕ ಸಮುದಾಯ ಜ್ಞಾನದ ಸೆಲೆಯಾಗಿರುವ ಗ್ರಾಮೀಣ ರೈತರು, ರೈತ ಕಾರ್ಮಿಕರು, ದಲಿತರು, ಅಲೆಮಾರಿಗಳು, ಗುಡ್ಡಗಾಡು ಜನರು ಹಾಗೂ ಎಲ್ಲಾ ಶ್ರಮಜೀವಿಗಳ ಬದುಕು ಮತ್ತು ಸಂಸ್ಕೃತಿಗಳಿಗೆ ಮನ್ನಣೆ ನೀಡಿದೆ.

  ಸುದ್ದಿ-ಸಮಾಚಾರ
 
  ಪ್ರವೇಶ
  ಹಣತೆ - ವಾರ್ತಾಪತ್ರ

ಯಾವುದೇ ದೇಶ ಅಥವಾ ನಾಡಿನ ಶ್ರೀಮಂತಿಕೆಯನ್ನು ಅಳೆಯಲು ಆ ನಾಡಿನ ಸಂಸ್ಕೃತಿ ಮತ್ತು ಪರಂಪರೆ, ಅಲ್ಲಿಯ ಜೀವನ ವಿಧಾನ ಮತ್ತು ಆ ಜನರು ಅನುಸರಿಸುವ ಮೌಲ್ಯಾದರ್ಶಗಳು ಮುಖ್ಯವಾಗುತ್ತವೆ. ಅಂಥ ಶ್ರೀಮಂತ ಇತಿಹಾಸ ಮತ್ತು ಪರಂಪರೆಯುಳ್ಳ ನಾಡು ಕರ್ನಾಟಕ. ಈ ನೆಲದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಎಲ್ಲವೂ ವಿಶಿಷ್ಟ ಹಾಗೂ ಅನನ್ಯ. ಅಂತೆಯೇ ಈ ಕಲೆ, ಸಂಸ್ಕೃತಿ ಮತ್ತು ಜ್ಞಾನಪರಂಪರೆಗಳು ಅಳಿಸಿ ಹೋಗದಂತೆ ಮಾಡಲು ಹಾಗೂ ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕು ಗೊಟಗೋಡಿಯಲ್ಲಿ ಪ್ರಪಂಚದಲ್ಲೇ ಮೊದಲನೆಯದಾದ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ.

 

ಕರ್ನಾಟಕ ಅಮೂಲ್ಯ ಹಾಗೂ ಸಮೃದ್ಧ ಜಾನಪದ ಸಂಪತ್ತಿನ ಆಗರವಾಗಿದೆ. ಈ ಜ್ಞಾನದ ಅನನ್ಯತೆಯನ್ನು ಶೋಧಿಸುವ, ಸಂರಕ್ಷಿಸುವ ಹಾಗೂ ಸಂವರ್ಧನೆಯ ಕಾರ್ಯವನ್ನು ನಿರ್ವಹಿಸುವ ಉದ್ದೇಶಕ್ಕಾಗಿ, ಅನಂತ ವೈವಿಧ್ಯದ ಈ ಜ್ಞಾನದ ಸಂಗ್ರಹ, ಸಂಪಾದನೆ, ಕಲಿಕೆ, ಪ್ರದರ್ಶನ ಕಾರ್ಯಗಳು ಇನ್ನೂ ತೀವ್ರಗತಿಯಲ್ಲಿ ಪ್ರಮಾಣಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸುವ ಉದ್ದೇಶಕ್ಕಾಗಿ ಜಾನಪದ ವಿಶ್ವವಿದ್ಯಾಲಯವನ್ನು ರೂಪಿಸಿದೆ.

 

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

ಗೊಟಗೋಡಿ, ಎನ್.ಎಚ್. -4, ಶಿಗ್ಗಾವಿ ತಾಲೂಕು, ಹಾವೇರಿ ಜಿಲ್ಲೆ,

ಕರ್ನಾಟಕ - 581 197

 
ಕುಲಪತಿಗಳು
- ಪ್ರೊ. ಅಂಬಳಿಕೆ ಹಿರಿಯಣ್ಣ
ಸಂದೇಶ...

ರಾಷ್ಟ್ರೀಯ ಮತ್ತು ಸಾಮಾಜಿಕ ಬದುಕಿನ ಎಲ್ಲ ಸಮಸ್ಯೆಗಳಿಗೆ ಗಾಂಧಿಮಾರ್ಗ ಪರಿಹಾರ : ಡಾ. ಶ್ರೀರಾಮ ಇಟ್ಟಣ್ಣವರ

ಗೊಟಗೋಡಿ/ ಶಿಗ್ಗಾವಿ : ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹತ್ಮಾ ಗಾಂಧೀಜಿಯವರ 145ನೇ ಜಯಂತ್ಯುತ್ಸವವನ್ನು ಆಚರಿಸಲಾಯಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಅವರು ಮಾತನಾಡಿ, ಇಂದಿನ ರಾಷ್ಟ್ರೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಉಂಟಾದ ಎಲ್ಲ ಸಮಸ್ಯೆಗಳಿಗೆ ಗಾಂಧಿಮಾರ್ಗ ಪರಿಹಾರವಾಗಬಲ್ಲದು ಎಂದು ಪ್ರತಿಪಾದಿಸಿದರು. ಗಾಂಧೀಜಿ ಅವರು ಭಾರತದ ಜನಸಾಮಾನ್ಯರ ಮೇಲೆ ಬೀರಿದ ಪ್ರಭಾವ ದೊಡ್ಡದು ಎಂದ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನಪದರನ್ನು ಹೋರಾಟಕ್ಕೆ ಅಣಿಗೊಳಿಸಿದ ಧೀಮಂತ ನಾಯಕ ಗಾಂಧೀಜಿ ಇಂದಿನ ಎಲ್ಲ ಸಮಸ್ಯೆಗಳಿಗೆ ಪರ್ಯಾಯಶಕ್ತಿ ಎಂದು ಬಣ್ಣಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಮಾತನಾಡಿ ತತ್ತ್ವರಹಿತ ರಾಜಕೀಯ, ನೀತಿಹೀನ ವಾಣಿಜ್ಯ, ಶೀಲವಿಲ್ಲದ ಶಿಕ್ಷಣ ಮುಂತಾದ ಆದರ್ಶ ತತ್ತ್ವಗಳನ್ನು ಇಡೀ ಜಗತ್ತಿಗೆ ತಿಳಿಸಿದ ಗಾಂಧೀಜಿಯವರು ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕನಸು ಕಂಡಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಪಾರಂಪರಿಕ ಜ್ಞಾನವನ್ನು ಸಂಗ್ರಹಿಸಿ, ಸಂರಕ್ಷಿಸಿ ಸಂವರ್ಧಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು. ಸರ್ವಾಧಿಕಾರ, ಅಧಿಕಾರಶಾಹಿಗಳಲ್ಲದೇ ಅನ್ಯಾಯ, ಅಧರ್ಮಗಳ ವಿರುದ್ಧ ಹೋರಾಡಿದ ಗಾಂಧೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಹಿಂಸಾಪರವಾದ ಹೋರಾಟ ಮಾಡಿದ ಗಾಂದೀಜಿಯವರು ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರಲ್ಲಿ ಸ್ವಯಂ ಅರಿವು ಮೂಡಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಂಗಮೇಶ ಎಸ್. ಗಣಿ ಸ್ವರಚಿತ ಕವನ ವಾಚಿಸಿದರು. ಜಾನಪದ ಸಾಹಿತ್ಯ ವಿದ್ಯಾರ್ಥಿಗಳಾದ ಎನ್.ಎನ್. ಸಕ್ರಿ, ಕುಮಾರ ಗಣೇಶ ಚವ್ಹಾನ, ಎನ್. ಮೋಹನ್ ಕುಮಾರ್ ಮಾತನಾಡಿದರು.
ಪೂರ್ವದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಕುಮಾರಿ ಅರ್ಚನಾ ಪ್ರಾರ್ಥಿಸಿದರು. ಡಾ. ಬಸಪ್ಪ ಬಂಗಾರಿ ಕಾರ್ಯಕ್ರಮ ನಿರೂಪಿಸಿದರು. ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ವಂದಿಸಿದರು.
ಕುಮಾರಿ ಶ್ವೇತಾ ಎಂ.ಬಿ. ಅವರು 'ಸ್ವಾತಂತ್ರ್ಯ ಉದಯ' ದ ಗಮಕ ವಾಚಿಸಿದರು. ಅವರ ನೇತೃತ್ವದಲ್ಲಿ ವಿವಿಧ ಕಲಾವಿದರಾದ ಗುರುನಾಥ ಹುಬ್ಬಳ್ಳಿ, ಬಿ.ಆರ್. ಪಾಟೀಲ, ಎನ್.ಎನ್. ಸಕ್ರಿ, ಎಚ್.ವೈ. ಬೆಂಗೇರಿ ಮುಂತಾದವರು ಭಜನೆ ಹಾಗೂ ಜನಪದ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಚಂದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

  ಅಧಿಸೂಚನೆಗಳು
ಅಧಿಸೂಚನೆ
2014-15 ನೇ ಸಾಲಿನ ಎಂ.ಫಿಲ್ / ಪಿಎಚ್.ಡಿ ಪ್ರವೇಶ ಅರ್ಜಿ
2014-15 ನೇ ಸಾಲಿನ ಎಂ.ಫಿಲ್ / ಪಿಎಚ್.ಡಿ ಅಧಿಸೂಚನೆ
ವಿವರಣಾ ಪುಸ್ತಕ
ಮಾಹಿತಿ ಕೈಪಿಡಿ
ಮಾನ್ಯತಾ ಅರ್ಜಿ
   
 
   
   
   
   
   
  ಕ್ಯಾಲೆಂಡರ್ ಸಮಾಚಾರ
   
   
   
   
   
   
 
© 2014 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ :