ವಸ್ತು ಸಂಗ್ರಹಾಲಯ > ಅಮೂಲ್ಯ ಜನಪದ ವಸ್ತುಗಳು
 

ಗ್ರಾಮ ಕರ್ನಾಟಕ - ಜಾನಪದ ವಸ್ತುಸಂಗ್ರಹಾಲಯ
ಜಂಗಮರೂಪದ ಭೌತಿಕ ಜ್ಞಾನಕಣಜವನ್ನಾಗಿ ಮಾರ್ಪಡಿಸುವ ಮತ್ತು ಸಂಶೋಧನಾತ್ಮಕ ನೆಲೆಗೆ ಮೂಲ ಮಾಧ್ಯಮವಾಗಿ ರೂಪಿಸುವ ಪ್ರಯತ್ನಗಳು ಈಗಾಗಲೇ ಯಶಸ್ವಿಯಾಗಿ ನಡೆದಿವೆ. ಮಾನವನ ತಿಳಿವಳಿಕೆ ಮತ್ತು ಅವನು ಸಾಗಿಬಂದ ದಾರಿಯ ಹೊಳಹುಗಳನ್ನು ಅರಿಯಲು, ಸಾಧನ-ಸಲಕರಣೆಗಳು ಮತ್ತು ಉಪಕರಣಗಳ ವೈಜ್ಞಾನಿಕ ಅಧ್ಯಯನದಿಂದ ಮಾತ್ರ ಸಾಧ್ಯ. ಅವುಗಳನ್ನು ಸಮಗ್ರವಾಗಿ ಸಂಗ್ರಹಿಸುವ, ವರ್ಗೀಕರಿಸುವ, ಅಧ್ಯಯನ- ಸಂಶೋಧನೆಗಳಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ, ಒಂದು ಕಾಲಘಟ್ಟದಲ್ಲಿದ್ದ ಜನ ಸಮುದಾಯದ ಬದುಕಿನ ಭೌತಿಕ ಸಾಕ್ಷಿರೂಪಗಳನ್ನು ಒಪ್ಪ-ಓರಣಗೊಳಿಸುವ ದೇಸಿ ವಿಶಿಷ್ಟ ವಸ್ತು ಸಂಗ್ರಹಾಲಯವು ರೂಪುಗೊಳ್ಳುತ್ತಿದೆ. ನಾಡಿನ ಸಮಗ್ರ ಭೌತಿಕ ಸಂಪನ್ಮೂಲದ ಸಂಗ್ರಹಣೆಯ ಉದ್ದೇಶ ಇಟ್ಟುಕೊಂಡು ವಿಶ್ವವಿದ್ಯಾಲಯ ಕಾರ್ಯೋನ್ಮುಖವಾಗಿದೆ. ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯ ಶಿಗ್ಗಾವಿ, ರಾಣೆಬೆನ್ನೂರು ಮತ್ತು ಹಾವೇರಿ ತಾಲ್ಲೂಕುಗಳಲ್ಲಿ ನಾಲ್ಕು ಜನ ಕ್ಷೇತ್ರ ಸಹಾಯಕರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ, ಈಗಾಗಲೇ 5000 ಕ್ಕೂ ಹೆಚ್ಚು ಅಮೂಲ್ಯವಾದ ಜನಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದು, ನಾಡಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ, ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಯಶಸ್ವಿಯಾಗಿ ಮುಂದುವರೆದಿದೆ. ವಿಶ್ವವಿದ್ಯಾಲಯದ ಸುಮಾರು 10 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಲಿರುವ ಆಕೃತಿಗಳು, ಜಾನಪದದ ಮಹತ್ವದ ವಸ್ತುಗಳನ್ನು ತಮ್ಮ ಮಡಿಲಲ್ಲಿ ಇಟ್ಟುಕೊಂಡು ಒಂದು ಆಕರ್ಷಣೆಯ ಕೇಂದ್ರವಾಗಿ ಸಂಗ್ರಹಾಲಯವು ರೂಪುಗೊಳ್ಳಬೇಕೆಂಬುದು ವಿಶ್ವದ್ಯಾಲಯದ ಕನಸು.

ವಸ್ತು ಸಂಗ್ರಹಾಲಯದ ಕಲ್ಪಿತ ಸಿದ್ಧಮಾದರಿಯನ್ನು ತೊಡೆದು ಹಾಕಿ, ಅದನ್ನೊಂದು ಅಧ್ಯಯನದ ಆಕರವಾಗಿ ರೂಪಿಸುವ ಉದ್ದೇಶ ಇರುವುದರಿಂದಲೇ ವ್ಯವಸ್ಥಿತ ವರ್ಗೀಕರಣದ ಮೂಲಕ ವೈಜ್ಞಾನಿಕತೆ ತರುವುದು ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯದ ಹಿಂದಿರುವ ಮುಖ್ಯ ಉದ್ದೇಶವಾಗಿದೆ. ಕೃಷಿ ಉಪಕರಣಗಳಾದ ಕೂರಿಗೆ ಬಟ್ಟಲು, ನೇಗಿಲು ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳು, ಪೂಜಾ ಸಾಮಗ್ರಿಗಳು, ವಸ್ತ್ರಾಭರಣಗಳು ಮತ್ತು ಕರಕುಶಲ ವಸ್ತುಗಳು - ಎಲ್ಲವೂ ಈ ರೀತಿ ಅನುಕ್ರಮವಾಗಿ ಜೋಡಿಸಲ್ಪಟ್ಟು ವಸ್ತುಸಂಗ್ರಹಾಲಯವು ನೋಡುಗರಿಗೆ ಆನಂದವನ್ನು, ಸಂಶೋಧಕರಿಗೆ ಆಕರವನ್ನು ಒದಗಿಸುತ್ತದೆ. ಜನಬದುಕಿನ ಜೊತೆ ನೇರ ಸಂಪರ್ಕ ಸಾಧಿಸುವ ಮೂಲಕ ಜನಮುಖಿ ವಿಶ್ವವಿದ್ಯಾಲಯ ಆಗಬೇಕೆಂಬ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮೂಲ ಉದ್ದೇಶ ಸಾಕಾರಗೊಳ್ಳಲಿದೆ. ಕ್ಷೇತ್ರ ಸಹಾಯಕರು ವಸ್ತು ಸಂಗ್ರಹದ ನಿಮಿತ್ತ ಪ್ರತಿ ಹಳ್ಳಿಯ, ಪ್ರತಿಯೊಂದು ಮನೆಗೂ ಭೇಟಿಕೊಟ್ಟು ವಿಶ್ವವಿದ್ಯಾಲಯದ ಕಾರ್ಯೋದ್ದೇಶವನ್ನು ಮನವರಿಕೆ ಮಾಡಿ ಕೊಡುವ ಮೂಲಕ ಅದು ಸಾಧ್ಯವಾಗುತ್ತಿದೆ. ಗ್ರಾಮ ಕರ್ನಾಟಕ ವಸ್ತು ಸಂಗ್ರಹಾಲಯದ ಈ ಯೋಜನೆ ಜಾನಪದ ವಿಶ್ವವಿದ್ಯಾಲಯದ ಒಂದು ಮಾದರಿ ಕೆಲಸವಾಗಲಿದೆ. ಅದನ್ನು ರೂಪುಗೊಳಿಸಲು ಹೇಗೆ ಸಾಧ್ಯ ಎಂಬ ಚಿಂತನೆಯೊಂದಿಗೆ ವಸ್ತುಸಂಗ್ರಹಾಲಯವನ್ನು ವಿಶಿಷ್ಟವಾಗಿ ನಿರ್ಮಿಸಲಾಗುತ್ತಿದೆ. ವಸ್ತು ಸಂಗ್ರಹಾಲಯವು ಪೂರ್ವಿಕರ ಜೀವನ ವಿಧಾನ, ಬಳಸುತ್ತಿದ್ದ ವಸ್ತುಗಳ ತಾಳಿಕೆ-ಬಾಳಿಕೆ, ಉಪಯುಕ್ತತೆ ಅದರ ಮಹತ್ವ ಮುಂತಾದ ಅಂಶಗಳ ಬಗ್ಗೆ ಜನರಲ್ಲಿ ಮರುಬಳಕೆಯ ಪ್ರಜ್ಞೆ ಚಿಗುರೊಡೆಯುವಂತೆ ಪ್ರೇರೇಪಿಸುವಂತಾಗಬೇಕು. ಸಂಗ್ರಹಿಸಲಾದ ವಸ್ತುಗಳನ್ನು ಅಂದವಾಗಿ ಜೋಡಿಸಿ ಪ್ರದರ್ಶನಕ್ಕಿಡಲಾಗುವುದಲ್ಲದೆ, ಗ್ರಾಮದ ಹೆಸರು, ವಸ್ತುವಿನ ಹೆಸರು ಮತ್ತು ಪ್ರಕಾರ, ನೀಡಿದವರ ವಿಳಾಸ, ವಸ್ತುವಿನ ಬಳಕೆಯ ಕಾಲ, ತಯಾರಿಕೆಯ ಮೂಲ, ಅದರ ಉಪಯುಕ್ತತೆ ಮತ್ತು ಮಹತ್ವ ಈ ಎಲ್ಲ ಸಂಗತಿಗಳನ್ನು ಲಿಖಿತ ರೂಪದಲ್ಲಿ ಕ್ಷೇತ್ರ ಸಹಾಯಕರು ದಾಖಲಿಸುತ್ತಾರೆ. ಇಂಗಳಾರ ಮರದಿಂದ ತಯಾರಿಸಲಾಗುವ ಹುಟ್ಟು ಎಂಬ ಉಪಕರಣವನ್ನು ಹುಗ್ಗಿ ತಯಾರಿಸಲು ಉಪಯೋಗಿಸುತ್ತಾರೆ. ಉದಾಹರಣೆಗೆ, ಇಂಗಳಾರ ಮರವು ಅಡುಗೆ ಕೆಡದಂತೆ ಮತ್ತು ರುಚಿ ಹೆಚ್ಚಿಸುವ ಗುಣ ಹೊಂದಿದೆ ಎಂಬುದೇ ಇದಕ್ಕೆ ಕಾರಣವಾಗಿದೆ. ಜೊತೆಗೆ ಪ್ರತಿ ವಸ್ತುಗಳ ಛಾಯಾಚಿತ್ರವನ್ನು ಬಿಡಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಹಿಂದಿನ ಕಾಲದಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳ ಬಳಕೆ ಹಾಗೂ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಇದು ಜ್ಞಾನದ ವರ್ಗಾವಣೆಯ ಇನ್ನೊಂದು ಬಗೆಯೇ ಆಗಿದೆ. ಇಂತಹ ಕಾರ್ಯದಿಂದ ಪಾರಂಪರಿಕ ಜ್ಞಾನದ ಶೋಧ, ಅದರ ಮರುಬಳಕೆ, ಮಹತ್ವಗಳನ್ನು ಗುರುತಿಸಿದಂತಾಗುತ್ತದೆ. ಹೀಗಾಗಿ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಮೂಲ ಆಕರವಾಗಿ ಈ ವಸ್ತು ಸಂಗ್ರಹಾಲಯ ಸಹಕಾರಿಯಾಗುತ್ತದೆ. ಪೂರ್ವಜರು ಬಳಸುತ್ತಿದ್ದ ಸಾಧನ-ಸಲಕರಣೆಗಳು ಇವತ್ತಿನ ಕಾಲದಲ್ಲಿ ಯಥಾಸ್ಥಿತಿಯಲ್ಲಿ ಮರುಬಳಕೆಗೆ ಯೋಗ್ಯವೇ ಎಂದು ಪರಿಶೀಲಿಸಿ ಹಾಗಿಲ್ಲದಿದ್ದಲ್ಲಿ ಅದರ ಮೂಲ ಸ್ವರೂಪದಲ್ಲಿ ಬದಲಾವಣೆ ತಂದುಕೊಂಡಾದರೂ ಉಪಯೋಗಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸಲು ವಸ್ತು ಸಂಗ್ರಹಾಲಯದಿಂದ ಸಾಧ್ಯವಾಗುತ್ತದೆ.

ಜಾನಪದೀಯ ಜ್ಞಾನದ ನೆಲೆಯಲ್ಲಿಯೇ ಕಡಿಮೆ ಖರ್ಚು, ಹೆಚ್ಚು ಬಾಳಿಕೆ ಮತ್ತು ಆರೋಗ್ಯ ಸುಧಾರಣೆ ಇವೆಲ್ಲವನ್ನೂ ಹಿಂದಿನ ಜನ ಕಂಡುಕೊಂಡಿದ್ದರು. ಆದರೆ ಇಂದು ಅದು ಕಷ್ಟಸಾಧ್ಯ. ಅವನ್ನು ಸರಳಗೊಳಿಸಿ, ಸಾಧ್ಯವಾಗಿಸಿಕೊಳ್ಳುವ ಜರೂರತ್ತು ನಮಗೆಲ್ಲ ಇದೆ. ಪ್ರಸ್ತುತ ಜಗತ್ತಿನ ಮಾರುಕಟ್ಟೆಗೆ ತೀವ್ರ ಪೈಪೋಟಿ ಒಡ್ಡುವ ಶಕ್ತಿ ಹಿಂದಿನ ಜನ ಬಳಸುತ್ತಿದ್ದ ವಸ್ತುಗಳಿಗೆ ಇದೆ. ವಸ್ತುಗಳ ಮಾದರಿ ಅನುಸರಿಸಿ, ಯೋಗ್ಯ ರೀತಿಯಲ್ಲಿ ಮರು ಪ್ರತಿಕೃತಿ ತಯಾರಿಸಿ, ಆರ್ಥಿಕ ಉತ್ಪನ್ನಗಳಾಗಿ ಮಾರ್ಪಡಿಸಲು ಜಾನಪದ ವಸ್ತು ಸಂಗ್ರಹಾಲಯದಿಂದ ಸಾಧ್ಯವಾಗುತ್ತದೆ. ಮುಂಬರುವ ದಿನಗಳಲ್ಲಿ ವಿದ್ವಾಂಸರ, ಮಾರ್ಗದರ್ಶಕರ ನೆರವಿನಿಂದ, ಕ್ಷೇತ್ರ ಸಹಾಯಕರ ಉತ್ಸಾಹ, ಕಾರ್ಯಕ್ಷಮತೆಗಳನ್ನು ಉಪಯೋಗಿಸಿಕೊಂಡು, ನಾಡಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಜೀವನದ ದೇಸೀ ಜ್ಞಾನ ಪರಂಪರೆಯ ಪ್ರತೀಕಗಳಾದ ಪರಿಕರಗಳನ್ನು ಸಮಗ್ರವಾಗಿ ಸಂಗ್ರಹಿಸಿ, `ಮಾದರಿ ದೇಸೀ ವಸ್ತುಸಂಗ್ರಹಾಲಯ' ರೂಪಿಸುವ ಮಹದಾಸೆ ನಮ್ಮದು.


ಗ್ರಾಮ ಕರ್ನಾಟಕ : ವಸ್ತು ಸಂಗ್ರಹಾಲಯ ಸಂಗ್ರಹಿಸಲ್ಪಟ್ಟ ವಸ್ತುಗಳ ವಿವರಗಳ ಮಾದರಿ

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India