ಯೋಜನೆಗಳು > ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ
 

* ವಿವರಗಳು ಅವರೋಹಣ ಕ್ರಮದಲ್ಲಿದೆ.


ಪಟ್ಟಾಂಗ-24
ತಿಂಗಳ ಅತಿಥಿ : ಅನುಭವಿ ಕಲಾವಿದರಿಂದ ಜನಪದ ಕಲೆಗಳ ಪರಿಷ್ಕರಣೆಯಾಗಲಿ: ಪ್ರೊ. ಅಂಬಳಿಕೆ ಹಿರಿಯಣ್ಣ

ಅನುಭವಿ ಕಲಾವಿದರಿಂದ ಜನಪದ ಕಲೆಗಳ ಪರಿಷ್ಕರಣೆಯಾಗಲಿ: ಪ್ರೊ. ಅಂಬಳಿಕೆ ಹಿರಿಯಣ್ಣ

ಶಿಗ್ಗಾವಿ/ಗೊಟಗೋಡಿ: ಜನಪದ ಕಲೆಯ ಪ್ರದರ್ಶನದಲ್ಲಿ ಪರಿಣತಿ ಹೊಂದಿರುವ ಅನುಭವಿ ಕಲಾವಿದರು ಮತ್ತು ಜಾನಪದ ವಿದ್ವಾಂಸರು ಜೊತೆಗೂಡಿ ಇಂದಿನ ಪೀಳಿಗೆಯ ಜನತೆಗೆ ಆಕರ್ಷಕವಾಗುವಂತೆ, ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ಪರಿಷ್ಕರಣೆ ಮಾಡುವ ಅನಿವಾರ್ಯತೆ ಕಾಣುತ್ತಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಾಗಂದಿಗೆ' ಸಭಾಂಗಣದಲ್ಲಿ ಅಕ್ಟೋಬರ್ 27, 2014 ರಂದು ನಡೆದ ಪಟ್ಟಾಂಗ-24 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಪದ ಕಲಾ ಪ್ರದರ್ಶನದಲ್ಲಿ ಹಲವಾರು ಹೊಸ ಪ್ರಯೋಗಗಳು ನಡೆಯುತ್ತಿವೆ. ಪ್ರೇಕ್ಷಕರ ಅಭಿರುಚಿಯನ್ನು ಮನಗಂಡಿರುವ ಹಿರಿಯ ಕಲಾವಿದರು ಜನಪದ ಕಲೆಗಳ ಪ್ರದರ್ಶನದಲ್ಲಿ ಸುಧಾರಣೆ ಮಾಡಬೇಕಾಗಿರುವುದು ಉತ್ತಮವಾದ ಕಾರ್ಯವಾಗಿದೆ ಎಂದು ಹೇಳಿದರು. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಜನಪದ ಕಲಾವಿದರು ಮಾಶಾಸನಕ್ಕಷ್ಟೇ ಬಳಸಿಕೊಳ್ಳದೆ, ಕಲೆಗಳ ಉಳಿವಿಗೆ, ಮುಂದಿನ ಬಯಲಾಟ ಕಲಾವಿದರಾದ ಶ್ರೀ ಟಿ.ಎಸ್. ರವೀಂದ್ರ ಅವರು ಮಾತನಾಡಿ, ಆರ್ಥಿಕ ಮುಗ್ಗಟ್ಟಿನ ನಡುವೆಯೇ ತಂದೆಯಿಂದ ಕಲಿತ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಮೈಸೂರಿನ ವಿಶ್ವಮಾನವ ವಿದ್ಯಾನಿಕೇತನ ಶಾಲೆಯ ಮಕ್ಕಳಿಗೆ ಕಲೆಯನ್ನು ಕಲಿಸುವ ಕಾಯಕದಲ್ಲಿ ತೊಡಗಿದ್ದು, ಸ್ವಪ್ರಯತ್ನದಲ್ಲಿ ಮೂಡಲಪಾಯ ಬಯಲಾಟ ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇನೆಂದು ತಮ್ಮ ಕಲಾ ಜೀವನದ ಅನುಭವಗಳನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮೈಸೂರಿನ ವಿಶ್ವಮಾನವ ವಿದ್ಯಾನಿಕೇತನ ಶಾಲೆಯ ಮಕ್ಕಳಿಂದ ಮೂಡಲಪಾಯ ಬಯಲಾಟ ಕಲೆಯ ಪ್ರಾತ್ಯಕ್ಷಿಕೆಯನ್ನು ಕಾರ್ಯಕ್ರಮದ ಆರಂಭದಲ್ಲಿ ಪ್ರಸ್ತುತಪಡಿಸಲಾಯಿತು. ಇದೇ ಸಂದರ್ಭದಲ್ಲಿ ಮೂಡಲಪಾಯ ಬಯಲಾಟ ಕಲಾವಿದರಾದ ಶ್ರೀ ಟಿ.ಎಸ್. ರವೀಂದ್ರ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಿ. ಬಿ. ನಾಯಕ, ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರು, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಸ.ಚಿ. ರಮೇಶ, ಭಾಷಾಂತರ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ. ಪ್ರೇಮಕುಮಾರ, ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ಚಂದ್ರಪೂಜಾರಿ, ಡಾ. ಶ್ರೀಶೈಲ ಹುದ್ದಾರ, ಮೈಸೂರಿನ ವಿಶ್ವಮಾನವ ವಿದ್ಯಾನಿಕೇತನ ಶಾಲೆಯ ಸಂಸ್ಥಾಪಕರಾದ ಪ್ರೊ. ಬಿ. ಕೆ. ಚಂದ್ರಶೇಖರಗೌಡ, ಮುಖ್ಯೋಪಾಧ್ಯಾಯರಾದ ಶ್ರೀ ಮಾರುತಿ, ಶ್ರೀ ಅನಂತವರ್ಧನ ಅವರುಗಳು ಉಪಸ್ಥಿತರಿದ್ದರು. ಕಲಾವಿದ ಶ್ರೀ ಟಿ.ಎಸ್. ರವೀಂದ್ರ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀ ಯತೀಶ ಎಲ್. ಕೊಡಾವತ್ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿ, ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿ ಶ್ರೀ ಯೋಗೇಶ ಪಾಟೀಲ ನಿರೂಪಿಸಿದರು. ಸ್ನಾತಕೋತ್ತರ ವಿದ್ಯಾರ್ಥಿ ಶ್ರೀ ಬಸವರಾಜ ಜವಳಗಟ್ಟಿ ವಂದಿಸಿದರು.


ಪಟ್ಟಾಂಗ-23
ತಿಂಗಳ ಅತಿಥಿ : ಜನಪದ ಕಲಾವಿದರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗಬೇಕು: ಕಲಾವಿದ ಗಂಗಾಧರಗೌಡ

ಜನಪದ ಕಲಾವಿದರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಸಿಗಬೇಕು: ಕಲಾವಿದ ಗಂಗಾಧರಗೌಡ

ಗೊಟಗೋಡಿ / ಶಿಗ್ಗಾವಿ: ಸ್ಮರಣ ಶಕ್ತಿಯಿಂದಲೇ ಮಹಾಪುರಾಣ ಮತ್ತು ಮಹಾಕಾವ್ಯಗಳನ್ನು ಪ್ರಾತ್ಯಕ್ಷಿಕೆ ನೀಡುವ ಜನಪದ ಕಲಾವಿದರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಪುರಸ್ಕಾರಗಳು ದೊರೆಯಬೇಕು ಎಂದು ತುಮಕೂರು ಜಿಲ್ಲೆಯ ದಂಡಿನಶಿವರದ ಸೋಮನಕುಣಿತ ಕಲೆಯ ಖ್ಯಾತ ಕಲಾವಿದರಾದ ಶ್ರೀ ಡಿ.ಎಸ್. ಗಂಗಾಧರಯ್ಯ ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2014 ರ ಸೆಪ್ಟೆಂಬರ್ 30 ರಂದು ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-23 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನಾಡಿನ ಬಹಳಷ್ಟು ಜನಪದ ಕಲೆಗಳು ಸೌಲಭ್ಯದ ಕೊರತೆಯಿಂದಾಗಿ ಕಲಾವಿದರು ತಮ್ಮ ಮುಂದಿನ ಪೀಳಿಗೆಯವರಿಗೆ ಕಲೆಯನ್ನು ಕಲಿಸುತ್ತಿಲ್ಲ. ಪ್ರಮುಖವಾಗಿ ವಾದ್ಯ ಕಲಾವಿದರು ಬೇರೆ ವೃತ್ತಿಯನ್ನು ಆಯ್ದುಕೊಳ್ಳುತ್ತಿರುವುದರಿಂದ ಕಲೆಯನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿಯಿಂದಾಗಿ ಮೂಲ ಜನಪದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ವಿಷಾದಿಸಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಧಾರ್ಮಿಕ ಕಲಾಗುಂಪಿನಲ್ಲಿ ಆರಾಧನ ಕಲೆಯಾದ ಸೋಮನಕುಣಿತ ಇಂದು ದೇವಸ್ಥಾನಗಳ ಪ್ರಾಂಗಣದಿಂದ ಹೊರಬಂದು ಬಯಲಿನಲ್ಲಿ ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸ್ತ್ರೀ ದೈವಗಳ ಅಂಗರಕ್ಷಕರನ್ನು ಪ್ರತಿಬಿಂಬಿಸುವ ಈ ಕಲೆ ಮಹಿಳೆಯರು ಕಲಿಯುವ ಬಗ್ಗೆ ಚರ್ಚೆಯಾಗಬೇಕಾಗಿದೆ. ಕಲೆಯ ಬಗ್ಗೆ ಕಾಳಜಿ, ಕಳಕಳಿಯಿರುವ ಮತ್ತು ಸೋಮನ ಕುಣಿತ ಕಲೆಯ ಉಳಿವಿಗೆ ಶ್ರಮಿಸುತ್ತಿರುವ ಶ್ರೀ ಗಂಗಾಧರಗೌಡ ಅವರ ಕಾರ್ಯವನ್ನು ಶ್ಲಾಘಿಸಿದರು.

ಮಾನ್ಯ ಕುಲಸಚಿವರಾದ ಪ್ರೊ. ಡಿ. ಬಿ. ನಾಯಕ ಅವರು ಮಾತನಾಡಿ, ಪ್ರಸ್ತುತ ನಾವು ಜನಪದ ಕಲೆಗಳನ್ನು ಉಳಿಸುವ ಸಂಕೀರ್ಣವಾದ ಸುಸ್ಥಿತಿಯಲ್ಲಿದ್ದೇವೆ. ಒಂದು ದೇಶ ತನ್ನನ್ನು ಗುರುತಿಸಿಕೊಳ್ಳಲು ಅಲ್ಲಿನ ಅನನ್ಯವಾದ ಜನಪದ ಕಲೆಗಳು ಮತ್ತು ಪರಂಪರೆ ಉಳಿಯಬೇಕು ಎಂದು ಪ್ರತಿಪಾದಿಸಿದರು. ಶ್ರೀ ಡಿ.ಎಸ್. ಗಂಗಾಧರಗೌಡ ಮತ್ತು ಅವರ ಕಲಾವಿದರ ತಂಡದಿಂದ ಸೋಮನಕುಣಿತ ಕಲೆಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಡಿ.ಎಸ್. ಗಂಗಾಧರಗೌಡ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರು, ಮೌಲ್ಯಮಾಪನ ಕುಲಸಚಿವರು ಆದ ಪ್ರೊ. ಸ.ಚಿ. ರಮೇಶ, ನಿರ್ದೇಶಕ ಹಾಗೂ ಪ್ರಾಧ್ಯಾಪಕರಾದ ಡಾ. ಕೆ. ಪ್ರೇಮಕುಮಾರ, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಕೆ.ಎನ್. ಚಂದು, ಡಾ. ಶ್ರೀಶೈಲ ಹುದ್ದಾರ ಅವರುಗಳು ಉಪಸ್ಥಿತರಿದ್ದರು. ಕಲಾವಿದ ಶ್ರೀ ಮೋಹನ ಕುಮಾರ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ವೃಷಭಕುಮಾರ ಅವರು ಪ್ರಾಸ್ತಾವಿಕ ನುಡಿಗಳೊಡನೆ ಸ್ವಾಗತಿಸಿದರು. ಜನಪದ ಸಾಹಿತ್ಯದ ವಿದ್ಯಾರ್ಥಿ ಶ್ರೀ ಜಗದೀಶ ನಿರೂಪಿಸಿದರು. ಜನಪದ ಕಲೆಯ ವಿದ್ಯಾರ್ಥಿ ಶ್ರೀ ಎನ್.ಎನ್. ಸಕ್ರಿ ವಂದಿಸಿದರು.


ಪಟ್ಟಾಂಗ-22
ತಿಂಗಳ ಅತಿಥಿ : ಆಧುನಿಕ ಮಾಧ್ಯಮಗಳ ಹಾವಳಿಯಿಂದಾಗಿ ಮುಖವೀಣೆ ಕಲೆ ಮಾಯ : ಕಲಾವಿದ ಶ್ರೀ ಆಂಜನಪ್ಪ

ಆಧುನಿಕ ಮಾಧ್ಯಮಗಳ ಹಾವಳಿಯಿಂದಾಗಿ ಮುಖವೀಣೆ ಕಲೆ ಮಾಯ : ಕಲಾವಿದ ಶ್ರೀ ಆಂಜನಪ್ಪ

ಗೊಟಗೋಡಿ/ ಶಿಗ್ಗಾವಿ : ವಿಶಿಷ್ಟ ಜನಪದ ಮುಖವೀಣೆ ವಾದ್ಯವನ್ನು ನುಡಿಸುವುದೇ ನನ್ನ ಪಾಲಿನ ಕಾಯಕ ಎಂದು ಮುಖವೀಣೆ ಕಲಾವಿದರಾದ ಶ್ರೀ ಮುಖವೀಣೆ ಆಂಜನಪ್ಪ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2014ರ ಆಗಸ್ಟ್ 28ರಂದು ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-22 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಅವರು ಮಾತನಾಡಿದರು. ಕುಟುಂಬದ ಬಳುವಳಿಯಾಗಿ ಬಂದಿರುವ ಈ ಮುಖವೀಣೆ ಕಲೆಯನ್ನು ಮುಂದುವರೆಸಿಕೊಂಡು ಹೋಗುವುದೇ ನನ್ನ ವೃತ್ತಿಯಾಗಿದೆ. ಆಧುನಿಕ ಮಾಧ್ಯಮಗಳ ಹಾವಳಿಯಿಂದಾಗಿ ಮುಖವೀಣೆ ನುಡಿಸಿದರೆ ಕೇಳುವ ಅಭಿರುಚಿ ಇಂದಿನ ಜನರಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮುಖವೀಣೆ ಕಲೆಯನ್ನು ಮುಂದುವರೆಸಿಕೊಂಡು ಹೋಗುವುದು ಸವಾಲಿನ ಕೆಲಸ ಎಂದರು. ತಾಳ್ಮೆ, ಆಸಕ್ತಿ, ಶ್ರದ್ಧೆ ಇದ್ದರೆ ಮುಖವೀಣೆ ನುಡಿಸುವುದನ್ನು ಕಲಿಯಬಹುದು. ಈ ವಿಶಿಷ್ಟ ಜನಪದ ಮುಖವೀಣೆ ಕಲೆಯನ್ನು ಯುವಪೀಳಿಗೆಗೆ ವರ್ಗಾಯಿಸಬೇಕಾದ ಅಗತ್ಯತೆ ಇದೆ ಎಂದು ಶ್ರೀ ಆಂಜನಪ್ಪ ಅವರು ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿನಾಶದ ಅಂಚಿನಲ್ಲಿರುವ ಪಾರಂಪರಿಕ ಕಲೆಗಳಲ್ಲಿ ವಿಶಿಷ್ಟವಾದ ಮುಖವೀಣೆ ಕಲೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ಶ್ರೀ ಮುಖವೀಣೆ ಆಂಜನಪ್ಪನವರ ಕಾರ್ಯ ಅಭಿನಂದನಾರ್ಹ. ವಿಶ್ವವಿದ್ಯಾಲಯದ ವಿದ್ಯಾಗಳಿಗೆ ಮುಖವೀಣೆ ಕಲೆಯ ಬಗೆಗೆ ತರಬೇತಿ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಮಾನ್ಯ ಕುಲಸಚಿವರಾದ ಪ್ರೊ.ಡಿ.ಬಿ. ನಾಯಕ ಅವರು, ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರೂ, ಮೌಲ್ಯಮಾಪನ ಕುಲಸಚಿವರೂ ಆದ ಪ್ರೊ. ಸ.ಚಿ. ರಮೇಶ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದು, ಮಾತನಾಡಿದರು. ಕಲಾವಿದರಾದ ಶ್ರೀ ಆಂಜನಪ್ಪನವರು ದೇವರ ನಾಮ, ಸಂಪ್ರದಾಯದ ಹಾಡು, ಕಲ್ಯಾಣಿ, ಭೈರವಿ ಮುಂತಾದ ರಾಗಗಳನ್ನು ಅಮೋಘವಾಗಿ ನುಡಿಸಿದರು. ಅವರ ಮಗ ಶ್ರೀ ತಿಮ್ಮಯ್ಯ ಅವರು ತಂದೆಯವರ ಕಲಾಪ್ರದರ್ಶನಕ್ಕೆ ಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ಮುಖವೀಣೆ ಆಂಜನಪ್ಪನವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ನಿರ್ದೇಶಕ ಹಾಗೂ ಪ್ರಾಧ್ಯಾಪಕರಾದ ಡಾ. ಕೆ. ಪ್ರೇಮಕುಮಾರ, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಬಸವರಾಜ ಬಂಡಿವಡ್ಡರ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾಗಳು ಹಾಜರಿದ್ದರು. ವಿದ್ಯಾಕುಮಾರ ಶ್ರೀ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಮರವಂತೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲಾವಿದ ಶ್ರೀ ನಾಗರಾಜ ಜಿ. ಕಾರ್ಯಕ್ರಮ ನಿರೂಪಿಸಿದರು. ವಸ್ತುಸಂಗ್ರಹಾಲಯದ ಸಹಾಯಕ ಶ್ರೀ ಭೀಮರಾಯಿ ಕಮ್ಮಾರ ವಂದಿಸಿದರು.


ಪಟ್ಟಾಂಗ-21
ತಿಂಗಳ ಅತಿಥಿ : ಜನಪದ ಕಲಾವಿದರಿಗೆ ಪರಂಪರಾಗತ ಕಲೆಯೇ ಜೀವಾಳ : ಶ್ರೀ ಪದಗಾರ ತಿಮ್ಮಯ್ಯ

ಜನಪದ ಕಲಾವಿದರಿಗೆ ಪರಂಪರಾಗತ ಕಲೆಯೇ ಜೀವಾಳ : ಶ್ರೀ ಪದಗಾರ ತಿಮ್ಮಯ್ಯ

ಗೊಟಗೋಡಿ/ ಶಿಗ್ಗಾವಿ : ನಾಡಿನ ಬುಡಕಟ್ಟು ಜನಪದ ಮಹಾಕಾವ್ಯಗಳಲ್ಲಿ ಜುಂಜಪ್ಪ ಮಹಾಕಾವ್ಯವು ವಿಶಿಷ್ಟವಾದುದಾಗಿದೆ. ಜುಂಜಪ್ಪ ಕಾವ್ಯವನ್ನು ಹಾಡುವುದಷ್ಟೇ ಮುಖ್ಯವಲ್ಲ; ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ಮುಖ್ಯ ಎಂದು ತುಮಕೂರು ಜಿಲ್ಲೆಯ ಬೇವಿನಹಳ್ಳಿಯ ಜುಂಜಪ್ಪ ಕಾವ್ಯ ಹಾಡುವ ಕಲಾವಿದರಾದ ಶ್ರೀ ಪದಗಾರ ತಿಮ್ಮಯ್ಯ ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2014ರ ಜುಲೈ 31ರಂದು ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-21 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಅವರು ಮಾತನಾಡಿದರು. ನಾಡಿನ ಸುಪ್ರಸಿದ್ಧ ಜನಪದ ಮಹಾಕಾವ್ಯಗಳಲ್ಲಿ ಒಂದಾದ ಜುಂಜಪ್ಪ ಕಾವ್ಯವು ಅದರ ಕಥಾವಸ್ತು, ಅದನ್ನು ಹಾಡುವ ಶೈಲಿಯಿಂದಾಗಿ ವಿಶಿಷ್ಟವೆನಿಸಿದೆ. ಈ ಕಾವ್ಯವನ್ನು ಹಾಡುವ ಕಲೆಯು ಸಮುದಾಯದ ಹಿರಿಯರಿಂದ ಬಳುವಳಿಯಾಗಿ ಬಂದಿದೆ. ಇಂದಿನ ದಿನಗಳಲ್ಲಿ ಮೂಲ ಜನಪದ ಕಲಾವಿದರಿಗೆ ತಮ್ಮ ಪರಂಪರಾಗತ ಕಲೆಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾದರೂ, ಕಲೆಗಳೇ ಅವರ ಜೀವಾಳ ಎಂದು ತಿಳಿಸಿದ ಅವರು, ಮೌಖಿಕ ಕಲೆಗಳನ್ನು ಉಳಿಸಿ-ಬೆಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಅನೇಕ ಬುಡಕಟ್ಟು ಕಾವ್ಯಗಳಲ್ಲಿ ಜುಂಜಪ್ಪ ಮಹಾಕಾವ್ಯ ಅನನ್ಯವಾದುದು. ಜುಂಜಪ್ಪ ಕಾವ್ಯದ ಕಥಾವಸ್ತು, ಹಾಡಿನ ಶೈಲಿ ಎಲ್ಲ ಕಾವ್ಯಗಳಿಗಿಂತ ಭಿನ್ನವಾಗಿದ್ದು, ಸಾಂಸ್ಕೃತಿಕವಾಗಿ ಮಹತ್ವದ ಕಲೆಯಾಗಿ ಇಂದಿಗೂ ಜೀವಂತವಾಗಿದೆ. ನಶಿಸಿ ಹೋಗುತ್ತಿರುವ ಮೌಖಿಕ ಕಲೆಗಳ ಸಂವರ್ಧನೆಗಾಗಿ ವಿಶ್ವವಿದ್ಯಾಲಯವು ಬದ್ಧವಾಗಿದೆ ಎಂದು ತಿಳಿಸಿದ ಅವರು, ಜುಂಜಪ್ಪ ಕಾವ್ಯದ ಮೂಲ ಹಾಡುಗಾರಿಕೆ ಕುರಿತು ವಿಶೇಷ ತರಬೇತಿ ಮತ್ತು ಕಾವ್ಯದ ಬಹುಮುಖೀ ಅಧ್ಯಯನಕ್ಕೆ ವಿಶೇಷ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು. ಮಾನ್ಯ ಕುಲಸಚಿವರಾದ ಪ್ರೊ. ಡಿ.ಬಿ. ನಾಯಕ ಅವರು ಮಾತನಾಡಿ, ಜುಂಜಪ್ಪ ಕಾವ್ಯವು ಕಾಡುಗೊಲ್ಲ ಸಮುದಾಯಕ್ಕೆ ಮಾತ್ರ ಸೀಮಿತಗೊಂಡಿದ್ದರೂ, ಅದರ ಸಾಂಸ್ಕೃತಿಕ ಹರವು ಬಹಳ ದೊಡ್ಡದು. ಇಂತಹ ಸಾಂಸ್ಕೃತಿಕ ಮಹತ್ವವುಳ್ಳ ಕಾವ್ಯವನ್ನು ಹಾಡುವ ಕಲಾವಿದರಿಗೆ ಸೂಕ್ತ ವೇದಿಕೆ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಶ್ರೀ ಪದಗಾರ ತಿಮ್ಮಯ್ಯ ಅವರೊಂದಿಗೆ ಕಲಾವಿದರಾದ ಗಣೆವಾದಕ ಶ್ರೀ ರಾಮಣ್ಣ ಹಾಗೂ ಜುಂಜಪ್ಪ ದೇವರ ಅರ್ಚಕರಾದ ಶ್ರೀ ಪೂಜಾರಿ ಚಿತ್ತಯ್ಯ ಅವರು ಸೇರಿಕೊಂಡು ಜುಂಜಪ್ಪ ಕಾವ್ಯವನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಪದಗಾರ ತಿಮ್ಮಯ್ಯ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರು, ಮೌಲ್ಯಮಾಪನ ಕುಲಸಚಿವರು ಆದ ಪ್ರೊ. ಸ.ಚಿ. ರಮೇಶ, ನಿರ್ದೇಶಕ ಹಾಗೂ ಪ್ರಾಧ್ಯಾಪಕರಾದ ಡಾ. ಕೆ. ಪ್ರೇಮಕುಮಾರ, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಕೆ.ಎನ್. ಚಂದು ಉಪಸ್ಥಿತರಿದ್ದರು. ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹೊನಗಾನಹಳ್ಳಿ ಕರಿಯಣ್ಣ, ಹಾವೇರಿ ಜಿಲ್ಲೆಯ ಸಹಾಯಕ ವಾರ್ತಾಧಿಕಾರಿಗಳಾದ ಶ್ರೀ ಜುಂಜಣ್ಣ ದಂಪತಿಗಳು ಹಾಜರಿದ್ದರು. ಕಲಾವಿದ ಶ್ರೀ ಕೆ.ಎಲ್. ಲಕ್ಷ್ಮಣ ಪ್ರಾರ್ಥಿಸಿದರು. ಕಲಾವಿದ ಶ್ರೀ ಎನ್. ಮೋಹನಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ಶ್ರೀ ಜಯದತ್ತ ಎಸ್. ಕಾರ್ಯಕ್ರಮ ನಿರೂಪಿಸಿದರು. ವಸ್ತುಸಂಗ್ರಹಾಲಯದ ಸಹಾಯಕ ಶ್ರೀ ಭೀಮರಾಯಿ ಕಮ್ಮಾರ ವಂದಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗೊಟಗೋಡಿ, ಶಿಗ್ಗಾವಿಯ ನಾಗರೀಕರು, ಕಲಾಸಕ್ತರು ಹಾಜರಿದ್ದರು.


ಪಟ್ಟಾಂಗ-20
ತಿಂಗಳ ಅತಿಥಿ : ವಿನಾಶದ ಅಂಚಿನಲ್ಲಿರುವ ಕೈಚಳಕದ ಜನಪದ ಕಲೆ : ಶ್ರೀ ವಿರೂಪಾಕ್ಷಪ್ಪ ಕಲ್ಯಾಣದವರ

ವಿನಾಶದ ಅಂಚಿನಲ್ಲಿರುವ ಕೈಚಳಕದ ಜನಪದ ಕಲೆ : ಶ್ರೀ ವಿರೂಪಾಕ್ಷಪ್ಪ ಕಲ್ಯಾಣದವರ ವಿಷಾದ

ಶಿಗ್ಗಾವಿ/ಗೊಟಗೋಡಿ: ಪಾರಂಪರಿಕ ಕಲೆಯಾದ ಕೈಚಳಕದ ಕಲೆಯು ವಿದ್ಯಾವಂತರ ಮನೋರಂಜನೆಗಾಗಿ ಹಾಗೂ ಮೂಲ ಕಲಾವಿದರ ಉಪಜೀವನದ ವೃತ್ತಿಯಾಗಿ ಮಾತ್ರ ಅಸ್ತಿತ್ವದಲ್ಲಿದೆ ಎಂದು ಖ್ಯಾತ ಕೈಚಳಕ ಜನಪದ ಕಲಾವಿದರಾದ ಶ್ರೀ ವಿರೂಪಾಕ್ಷಪ್ಪ ಕಲ್ಯಾಣದವರ ಅವರು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ವತಿಯಿಂದ ದಿನಾಂಕ 2014ರ ಜೂನ್ 27ರಂದು ಆಯೋಜಿಸಿದ್ದ ವಿಶಿಷ್ಟ ಮತ್ತು ವಿನೂತನ ಕಾರ್ಯಕ್ರಮವಾದ ಪಟ್ಟಾಂಗ-20ರ ತಿಂಗಳ ಅತಿಥಿಯಾಗಿ ಪಾಲ್ಗೊಂಡು, ಅವರು ಮಾತನಾಡಿದರು. ಸುಡಗಾಡು ಸಿದ್ಧರ ಸಮುದಾಯದ ಪರಂಪರಾಗತ ಕಲೆಯಾಗಿರುವ ಕೈಚಳಕದ ಜನಪದ ಕಲೆಯನ್ನೇ ನಂಬಿಕೊಂಡು ಇಂದಿನ ದಿನಗಳಲ್ಲಿ ಜೀವನ ನಡೆಸುವುದು ಕಷ್ಟ. ಭಿಕ್ಷೆ ಬೇಡುತ್ತ ಅವಕಾಶ ದೊರೆತಾಗಲೆಲ್ಲ ಕೈಚಳಕದ ಜನಪದ ಕಲೆಯನ್ನು ಪ್ರದರ್ಶನ ಮಾಡಲಾಗುತ್ತಿದೆ. ಹೊಟ್ಟೆತುಂಬಿಸಿಕೊಳ್ಳಲು ಈ ಕಲೆಯೇ ಆಧಾರವಾಗಿದೆ ಎಂದ ಅವರು, ವಿನಾಶದ ಅಂಚಿನಲ್ಲಿರುವ ಕೈಚಳಕದ ಜನಪದ ಕಲೆಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸಬೇಕಾದ ಅಗತ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕೈಚಳಕದ ಜನಪದ ಕಲೆಯಂಥ ಮೂಲ ಜನಪದ ಕಲೆಗಳು ಕಣ್ಮರೆಯಾಗುತ್ತಿವೆ. ಕೈಚಳಕದ ಜನಪದ ಕಲೆಯನ್ನು ಪೋಷಿಸಿಕೊಂಡು ಬರುತ್ತಿರುವ ವಿರೂಪಾಕ್ಷಪ್ಪನವರ ಸೇವೆ ಅನುಪಮವಾದುದು. ಅಳಿವಿನಂಚಿನಲ್ಲಿರುವ ಪಾರಂಪರಿಕ ಕಲೆಗಳ ಪುನರುಜ್ಜೀವಕ್ಕೆ ವಿಶ್ವವಿದ್ಯಾಲಯವು ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ. ಕಲೆಗಳನ್ನು ನಂಬಿಕೊಂಡಿರುವ ಮೂಲ ಕಲಾವಿದರನ್ನು ಗೌರವಿಸುವುದರ ಜೊತೆಗೆ ಕಲಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡುವ ಮೂಲಕ ಇಂದಿನ ಯುವಪೀಳಿಗೆಗೆ ಪ್ರೇರಣೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲಾವಿದರಾದ ಶ್ರೀ ವಿರೂಪಾಕ್ಷಪ್ಪ ಕಲ್ಯಾಣದವರ, ಶ್ರೀ ವಿಠಲ ವಿರೂಪಾಕ್ಷಪ್ಪ ಕಲ್ಯಾಣದವರ, ಕುಲಸಚಿವರಾದ ಪ್ರೊ. ಡಿ.ಬಿ ನಾಯಕ, ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರೂ, ಮೌಲ್ಯಮಾಪನ ಕುಲಸಚಿವರೂ ಆದ ಪ್ರೊ. ಸ.ಚಿ. ರಮೇಶ, ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ. ಕೆ. ಪೇಮಕುಮಾರ, ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಆರ್ವಿಯಸ್ ಸುಂದರಂ, ಜಾನಪದ ವಿದ್ವಾಂಸರಾದ ಶ್ರೀ ಕ್ಯಾತನಹಳ್ಳಿ ರಾಮಣ್ಣ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀ ಕೆ.ಎನ್ ಚಂದು, ಸರ್ಟಿಫಿಕೇಟ್ ಶಿಕ್ಷಣದ ಗೌರವ ಸಂಯೋಜನಾಧಿಕಾರಿ ಡಾ. ಶ್ರೀಶೈಲ ಹುದ್ದಾರ ಮುಂತಾದವರು ಉಪಸ್ಥಿತರಿದ್ದರು. ಶ್ರೀ ಎನ್. ಮೋಹನ್ಕುಮಾರ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಕುಮಾರಿ ಎಂ.ಬಿ. ಶ್ವೇತಾ ನಿರೂಪಿಸಿದರು. ಶ್ರೀ ಶಂಭು ಯಮ್ಮಿ ವಂದಿಸಿದರು. ಜಾನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣದ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.


ಪಟ್ಟಾಂಗ-19
ತಿಂಗಳ ಅತಿಥಿ : ತತ್ವ ಪದಗಳು ಜೀವನದ ಮೌಲ್ಯವನ್ನು ಕಲಿಸುತ್ತವೆ: ಗಾಯಕ ವೀರಣ್ಣ ಕುಂಬಾರ

ತತ್ವ ಪದಗಳು ಜೀವನದ ಮೌಲ್ಯವನ್ನು ಕಲಿಸುತ್ತವೆ: ಗಾಯಕ ವೀರಣ್ಣ ಕುಂಬಾರ

ಶಿಗ್ಗಾವಿ/ಗೊಟಗೋಡಿ: ತತ್ವ-ದಾಸರ ಪದಗಳು ಮನುಕುಲದ ಜೀವನ ಮೌಲ್ಯಗಳನ್ನು ಕಲಿಸುತ್ತವೆ ಎಂದು ಬೀದರ್ ಜಿಲ್ಲೆಯ ಬಾಲ್ಕಿ ಮಠದ ಖ್ಯಾತ ಜನಪದ ಗಾಯಕರಾದ ವೀರಣ್ಣ ಕುಂಬಾರ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ವತಿಯಿಂದ ನಡೆಯುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಪಟ್ಟಾಂಗ-19 ರ ತಿಂಗಳ ಅತಿಥಿಯಾಗಿ ಇಂದು ಪಾಲ್ಗೊಂಡು ಅವರು ಮಾತನಾಡಿದರು. ಲೋಕದ ಅಂಕು-ಡೊಂಕು, ಸಮಾಜದ ಸುಧಾರಣೆ, ಸರಳ ಜೀವನದ ಅಂಶಗಳು, ವಿವೇಕಗಳನ್ನು ಹರಡುವಲ್ಲಿ ತತ್ವ-ದಾಸ ಪದಗಳನ್ನು ಬಳಕೆಯಾಗಿವೆ ಎಂದರು.
ತತ್ವ- ದಾಸ ಪದಗಳ ಹಾಡುಗಾರರಿಗೆ ಪ್ರಶಸ್ತಿ, ಸನ್ಮಾನಗಳು ವಿರಳ. ಅದನ್ನು ಬಯಸದೆ ಇಂದಿಗೂ ತತ್ವ- ದಾಸ ಪದಗಳನ್ನು ಹಾಡುತ್ತಿರುವವರು ಕೆಲವರು ಇದ್ದಾರೆ. ಬೀಸುವ, ಕುಟ್ಟುವ, ಸುಗ್ಗಿ ಪದಗಳ ಜೊತೆಗೆ ತತ್ವ-ದಾಸರ ಪದಗಳು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿಯೆಂದು ಅತಂಕ ವ್ಯಕ್ತ ಪಡಿಸಿದ ವೀರಣ್ಣ, ಈ ಬಗೆಯ ಹಾಡುಗಳನ್ನು ಸಂಗ್ರಹಿಸಿ ಉಳಿಸುವಂತಹ ಕಾರ್ಯವಾಗಬೇಕೆಂದು ಆಶಿಸಿದರು.
ಹಲವು ದಾಸರ, ಶರಣರ, ಮಹಾಂತರ, ನಿಜಗುಣ ಶಿವಯೋಗಿಗಳ ತತ್ವ ಪದಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿ, ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರೊಂದಿಗೆ ಸಂವಾದದಲ್ಲಿ ಭಾಗವಹಿಸಿದರು.

ಕುಲಪತಿಗಳಾದ ಪ್ರೊ. ಅಂಬಳಿಕೆ ಹಿರಿಯಣ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಜೀವನೋಪಾಯಕ್ಕೆ ಯಾವುದೇ ವೃತ್ತಿಯಲ್ಲಿ ತೊಡಗಿದ್ದರು, ಜನಪದ ಮತ್ತು ತತ್ವ-ದಾಸರ ಪದಗಳ ಹಾಡುಗಾರಿಕೆಯನ್ನು ಪ್ರವೃತ್ತಿಯಾಗಿಸಿಕೊಂಡವರು ನಿಜಕ್ಕೂ ನಾಶದ ಅಂಚಿನಲ್ಲಿರುವ ಕಲೆಗಳ ಬಗ್ಗೆ ಕಾಳಜಿ ಹೊಂದಿದವರಾಗಿದ್ದಾರೆ ಎಂದು ಶ್ಲಾಘಿಸಿದರು.
ತತ್ವ-ದಾಸರ ಪದಗಳು ಉಪದೇಶ ರೂಪದಲ್ಲಿದ್ದು, ಸುಂದರ, ಸ್ವಚಂದ ಜೀವನ ರೂಪಿಸಿಕೊಳ್ಳಲು, ಮೌಲ್ಯ, ವಿವೇಕ ಮತ್ತು ಆದರ್ಶಗಳನ್ನು ಹೊಂದಲು ಸಹಾಯಕವಾಗಿ. ವಿದ್ಯಾರ್ಥಿಗಳು ಜನಪದ ಕಲೆಗಳನ್ನು ಆಸಕ್ತಿಯಿಂದ ಕಲಿತು ಸಾರ್ಥಕತೆ ಪಡೆದುಕೊಳ್ಳ ಬೇಕು ಅದರೊಂದಿಗೆ ಜನಪದ ಕಲೆ ಮತ್ತು ಕಲಾವಿದರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕುಲಸಚಿವರಾದ ಡಾ.ಡಿ.ಬಿ ನಾಯಕ್, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಸ.ಚಿ.ರಮೇಶ, ಹಿರಿಯ ಸಂಶೋಧನಾ ಆಧಿಕಾರಿ ಡಾ.ಕೆ.ಪೇಮಕುಮಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀ ಕೆ.ಎನ್ ಚಂದು, ಗೌರವ ಸಂಯೋಜನಾಧಿಕಾರಿ ಡಾ.ಶ್ರೀಶೈಲ ಹುದ್ಧಾರ ಮತ್ತು ಅತಿಥಿ ಪ್ರಾಧ್ಯಾಪಕರಾದ ಡಾ.ರಾಮು ಮೂಲಗಿ ಉಪಸ್ಥಿತರಿದ್ದರು.
ವಿವಿಯ ಸರ್ಟಿಫಿಕೆಟ್ ಶಿಕ್ಷಣದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಸ್ನಾತಕೋತ್ತರ ವಿದ್ಯಾರ್ಥಿ ಎಸ್.ಎಸ್ ಸಿದ್ದರಾಜು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀಮತಿ ಅಭಿನಯ ವಂದಿಸಿದರು.


ಪಟ್ಟಾಂಗ-18
ತಿಂಗಳ ಅತಿಥಿ : ಮೂಲ ಡೊಳ್ಳುಕಲೆ ಮತ್ತು ಸಾಹಿತ್ಯ ಮರೀಚಿಕೆ : ಶ್ರೀ ಸೋಮನಿಂಗ ದನಗೊಂಡ

ಮೂಲ ಡೊಳ್ಳುಕಲೆ ಮತ್ತು ಸಾಹಿತ್ಯ ಮರೀಚಿಕೆ : ಶ್ರೀ ಸೋಮನಿಂಗ ದನಗೊಂಡ

ಗೊಟಗೋಡಿ/ ಶಿಗ್ಗಾವಿ : ಡೊಳ್ಳಿನ ಕಲೆ ಮತ್ತು ಹಾಡುಗಳು ಆಧುನಿಕ ಸೆಳೆತಕ್ಕೆ ಸಿಕ್ಕು ನಕಲಿಯಾಗುತ್ತಿವೆ ಎಂದು ಖ್ಯಾತ ಡೊಳ್ಳಿನ ಕಲಾವಿದರಾದ ಶ್ರೀ ಸೋಮನಿಂಗ ದನಗೊಂಡ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2014ರ ಏಪ್ರಿಲ್ 30ರಂದು ಮಂಗಳವಾರ ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-18 ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಡೊಳ್ಳಿನ ಹಾಡುಗಳ ಮೂಲ ಮಟ್ಟುಗಳನ್ನು ಹಾಡಿದರೆ ಇಂದಿನ ಜನರು ಕೇಳಲು ಇಷ್ಟಪಡುವುದಿಲ್ಲ. ಕಲಾವಿದರ ಬದುಕು ಇಂದು ಮಾರ್ಕೆಟ್ಟಾಗಿದೆ. ಜನರು ಬಯಸುವಂಥ ಧಾಟಿಗಳಲ್ಲಿ ಹಾಡುವುದರಿಂದ ಮೂಲಕಲೆ ಹಾಗೂ ಸಾಹಿತ್ಯ ಮರೀಚಿಕೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಮೂಲ ಡೊಳ್ಳಿನ ಕಲೆ ವಿನಾಶದ ಅಂಚಿನಲ್ಲಿದ್ದು, ಆ ಕಲೆಯ ಮೂಲಕ್ಕೆ ಧಕ್ಕೆಯಾಗದಂತೆ ಕಲೆಯನ್ನು ಪುನರುಜ್ಜೀವನಗೊಳಿಸುವುದು ಇಂದಿನ ಅಗತ್ಯವಾಗಿದೆ. ಮೂಲ ಜಾನಪದವನ್ನು ಹಾಳುಮಾಡುವ ಕೆಲಸವನ್ನು ಪ್ರೋತ್ಸಾಹಿಸುವ ಪ್ರವೃತ್ತಿ ನಿಲ್ಲಬೇಕು. ಮೂಲ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಮಹತ್ವದ ಯೋಜನೆಯೊಂದನ್ನು ರೂಪಿಸಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸೋಮನಿಂಗ ದನಗೊಂಡ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಿ.ಬಿ. ನಾಯಕ ಅವರು ಮಾತನಾಡಿದರು. ಮೌಲ್ಯಮಾಪನ ಕುಲಸಚಿವರು ಮತ್ತು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರಾದ ಪ್ರೊ. ಸ.ಚಿ. ರಮೇಶ ಅವರು ಉಪಸ್ಥಿತರಿದ್ದರು.
ಸಹ ಕಲಾವಿದರಾದ ಸಿದ್ದಣ್ಣ ದನಗೊಂಡ, ಮಾಳಪ್ಪ ದನಗೊಂಡ, ಮಲಕಪ್ಪ ತಿಕೋಟಿ, ಬಾಪು ಗೌಂಡಿ, ಶಿವನಿಂಗ ಹೊನವಾಡ, ಕೆಂಚಪ್ಪ ಬೆಳಗಾವಿ, ತಿಪ್ಪಣ್ಣ ಹೂಗಾರ, ಮುದಗೊಂಡ ಪೂಜಾರಿ ಅವರು ಡೊಳ್ಳಿನ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ವಿಶ್ವವಿದ್ಯಾಲಯದ ಶ್ರೀ ಮೋಹನಕುಮಾರ ಎನ್. ಪ್ರಾರ್ಥಿಸಿದರು. ಯೋಜನಾ ಸಹಾಯಕ ಶ್ರೀ ಸಂಗಮೇಶ ಎಸ್. ಗಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಶ್ರೀ ಯತೀಶ್ ಎಲ್. ಕೊಡಾವತ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ವಂದಿಸಿದರು.
ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಅತಿಥಿ ಪ್ರಾಧ್ಯಾಪಕ ಡಾ. ರಾಮು ಮೂಲಗಿ, ರಂಗಕರ್ಮಿ ಡಾ. ಶ್ರೀಶೈಲ ಹುದ್ದಾರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ. ಆನಂದಪ್ಪ ಜೋಗಿ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.


ಪಟ್ಟಾಂಗ-17
ತಿಂಗಳ ಅತಿಥಿ : ಲೋಕಾನುಭವ ಶಿಕ್ಷಣ ಪ್ರಚಾರಕ - ಯುಗಧರ್ಮ ರಾಮಣ್ಣ:

ಲೋಕಾನುಭವ ಶಿಕ್ಷಣ ಪ್ರಚಾರಕ : ಯುಗಧರ್ಮ ರಾಮಣ್ಣ:

ಶಿಗ್ಗಾವಿ/ಗೊಟಗೋಡಿ: ಲೋಕಾನುಭವ ಶಿಕ್ಷಣವನ್ನು ಪ್ರಚಾರಪಡಿಸುವ ಜನಪ್ರಿಯ ವ್ಯಕ್ತಿ, ಸಂವೇದನಾಶೀಲ, ಆಶುಕವಿ ಯುಗಧರ್ಮ ರಾಮಣ್ಣ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಪ್ರೊ. ಅಂಬಳಿಕೆ ಹಿರಿಯಣ್ಣನವರು ಪ್ರಶಂಶಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ವತಿಯಿಂದ ನಡೆಯುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಪಟ್ಟಾಂಗ-17 ರ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಲೋಕದ ಅಂಕು-ಡೊಂಕು, ಸಮಾಜದ ಸುಧಾರಣೆ, ಸರಳ ಜೀವನದ ಅಂಶಗಳು, ಪಾರಂಪರಿಕ ವಿವೇಕಗಳನ್ನು ಹರಡುವಲ್ಲಿ ಶ್ರಮಿಸುತ್ತಿರುವ ಯುಗಧರ್ಮ ರಾಮಣ್ಣ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು

ಪಟ್ಟಾಂಗ-17ರ ತಂಗಳ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ಯುಗಧರ್ಮ ರಾಮಣ್ಣ ಸಂವಾದದಲ್ಲಿ ಮಾತನಾಡಿ, ಜನಪದ ಪರಿಕರಗಳು ಮನಸ್ಸನ್ನು ಅರಳಿಸುತ್ತವೆ. ಆಧುನಿಕ ಪರಿಕರಗಳು ಮನುಷ್ಯನ ಸರ್ವಸ್ವವನ್ನು ಸಂಕುಚಿತಗೊಳಿಸುತ್ತವೆ. ಇಂದಿನ ಶಿಕ್ಷಣವು ಕೂಡ ಮನುಷ್ಯನನ್ನು ಸತ್ವಹೀನನ್ನಾಗಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಎನ್ನದೆ, ಬುದ್ಧಿವಂತಿಕೆಗಾಗಿ ಶಿಕ್ಷಣ ಕೊಡಿಸುವಂತೆ ಪೋಷಕರಿಗೆ ಕಿವಿಮಾತು ಹೇಳಿದರು.
ಶ್ರೀ ಯುಗಧರ್ಮ ರಾಮಣ್ಣ, ಶ್ರೀ ಶಿವ ಧರ್ಮ ಚಂದ್ರಣ್ಣ ಮತ್ತು ಶ್ರೀ ಶಾಂತ ನಾಯ್ಕ ಅವರುಗಳು ವಚನ, ಲಾವಣಿಗಳನ್ನು ಹಾಡಿದರು. ಕುಲಸಚಿವರಾದ ಡಾ.ಡಿ.ಬಿ ನಾಯ್ಕ, ಕುಲಸಚಿವರು (ಮೌಲ್ಯಮಾಪನ) ಪ್ರೊ.ಸ.ಚಿ.ರಮೇಶ, ಹಿರಿಯ ಸಂಶೋಧನಾ ಆಧಿಕಾರಿ ಡಾ.ಕೆ.ಪೇಮಕುಮಾರ, ಗೌರವ ಸಂಯೋಜನಾಧಿಕಾರಿ ಡಾ.ಶ್ರೀಶೈಲ ಹುದ್ಧಾರ, ಪ್ರಾಧ್ಯಾಪಕರಾದ ಪ್ರೊ.ಜಮುನಾ, ಸಹ ಪ್ರಾಧ್ಯಾಪಕರಾದ ಡಾ.ಸಿದ್ದಗಂಗಮ್ಮ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
ವಿವಿಯ ವಿದ್ಯಾಎನ್.ಎನ್ ಸಕ್ರಿ ಅವರು ಅತಿಥಿ ಪರಿಚಯಮಾಡಿ, ನಿರೂಪಿಸಿದರು, ಸಂಶೋಧನಾ ವಿದ್ಯಾರ್ಥಿನಿ ರಜೀಯಾ ಬೇಗಂ ಸ್ವಾಗತಿಸಿದರು. ವಿದ್ಯಾಜಗದೀಶ ವಂದಿಸಿದರು.


ಪಟ್ಟಾಂಗ-16
ತಿಂಗಳ ಅತಿಥಿ : ಜನಪದ ಸಂಸ್ಕೃತಿ ಸಂರಕ್ಷಣೆಗೆ ಜನಪದ ಕಲೆಗಳ ಉಳಿವು ಅಗತ್ಯ : ಶ್ರೀ ಯಮನಪ್ಪ ಬಿಸೆ

ಜನಪದ ಸಂಸ್ಕೃತಿ ಸಂರಕ್ಷಣೆಗೆ ಜನಪದ ಕಲೆಗಳ ಉಳಿವು ಅಗತ್ಯ : ಶ್ರೀ ಯಮನಪ್ಪ ಬಿಸೆ

ಗೊಟಗೋಡಿ/ ಶಿಗ್ಗಾವಿ : ಜನಪದ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಬೇಕೆಂದರೆ ಗೊಂದಲಿಗ ಕಲೆ ಸೇರಿದಂತೆ ಇತರೆ ಜನಪದ ಕಲೆಗಳನ್ನೂ ಉಳಿಸಿಕೊಳ್ಳಬೇಕಾದುದು ಅಗತ್ಯ ಎಂದು ಕಾಗಿನೆಲೆಯ ಖ್ಯಾತ ಗೊಂದಲಿಗ ಕಲಾವಿದರಾದ ಶ್ರೀ ಯಮನಪ್ಪ ಬಿಸೆ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2014ರ ಫೆಬ್ರುವರಿ 28ರಂದು ಶುಕ್ರವಾರ ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-16 ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಗೊಂದಲಿಗ ಕಲೆಯನ್ನು ಕಲಿತವರಿಗೆ ಸಮಾಜದಲ್ಲಿ ಮೊದಲಿನ ಆದರ, ಗೌರವವಿಲ್ಲ. ಕಲೆಯನ್ನು ನಂಬಿ ಜೀವನ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಯುವಕರು ಗೊಂದಲಿಗ ಕಲೆಯನ್ನು ಕಲಿತುಕೊಳ್ಳಲು ಮನಸ್ಸು ಮಾಡುತ್ತಿಲ್ಲ ಎಂದು ನೊಂದು ನುಡಿದ ಅವರು, ಈ ಕಲೆಯು ಉಳಿಯಬೇಕಾದರೆ ಮೂಲ ಕಲಾವಿದರು ಸೇರಿದಂತೆ ವಿದ್ವಾಂಸರು, ಬುದ್ಧಿಜೀವಿಗಳು, ಪ್ರಜ್ಞಾವಂತರು ಸಾಂಘಿಕ ಪ್ರಯತ್ನ ನಡೆಸಿದಾಗ ಮಾತ್ರ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಜನಪದ ಕಲೆ, ಸಂಸ್ಕೃತಿಯನ್ನು ಸಂರಕ್ಷಿಸಲು ವಿಶ್ವವಿದ್ಯಾಲಯವು ಬದ್ಧವಾಗಿದೆ. ಗೊಂದಲಿಗ ಕಲೆಯನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಲಿಸಿಕೊಡಲು ಸೂಕ್ತ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಿ.ಬಿ. ನಾಯಕ ಅವರು, ಮೌಲ್ಯಮಾಪನ ಕುಲಸಚಿವರು ಮತ್ತು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರಾದ ಪ್ರೊ. ಸ.ಚಿ. ರಮೇಶ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಯಮನಪ್ಪ ಬಿಸೆ, ಶ್ರೀ ಲೋಕಪ್ಪ ಗೂಡಕರ, ಶ್ರೀ ರಂಗಪ್ಪ ಬಿಸೆ, ಫಕೀರಪ್ಪ ಬಿಸೆ ಅವರು ಗೊಂದಲಿಗ ಕಲೆಯನ್ನು ಪ್ರದರ್ಶಿಸಿದರು. ಶ್ರೀ ಯಮನಪ್ಪ ಬಿಸೆ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಶ್ರೀ ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಎಂ.ಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಜಯದತ್ ಎಸ್. ಸ್ವಾಗತಿಸಿದರು. ಯೋಜನಾ ಸಹಾಯಕ ಶ್ರೀ ಅರುಣಕುಮಾರ್ ಎಚ್.ಕೆ. ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಕಾಶ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ್, ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ಚಂದ್ರ ಪೂಜಾರಿ, ಡಾ. ಶ್ರೀಶೈಲ ಹುದ್ದಾರ, ಕಾಗಿನೆಲೆಯ ವೈದ್ಯರಾದ ಡಾ. ಪ್ರಕಾಶ ಬಾರ್ಕಿ, ಶ್ರೀ ಎಂ. ನಾಗರಾಜ್, ಶ್ರೀ ಪುಂಡಲೀಕ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.


ಪಟ್ಟಾಂಗ-15
ತಿಂಗಳ ಅತಿಥಿ : ಜನಪದ ಸಂಸ್ಕೃತಿ ಸಂರಕ್ಷಣೆಗೆ ಕಲಾವಿದರ ನಿಷ್ಠೆ ಅಗತ್ಯ : ಪಿಚ್ಚಳ್ಳಿ ಶ್ರೀನಿವಾಸ ಪ್ರತಿಪಾದನೆ

ಜನಪದ ಸಂಸ್ಕೃತಿ ಸಂರಕ್ಷಣೆಗೆ ಕಲಾವಿದರ ನಿಷ್ಠೆ ಅಗತ್ಯ : ಪಿಚ್ಚಳ್ಳಿ ಶ್ರೀನಿವಾಸ ಪ್ರತಿಪಾದನೆ

ಗೊಟಗೋಡಿ/ ಶಿಗ್ಗಾವಿ : ಮೂಲ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಳ್ಳುವ ಹೆಚ್ಚಿನ ಜವಾಬ್ದಾರಿ ಕಲಾವಿದರ ಮೇಲಿದೆ ಎಂದು ಕೋಲಾರ ಜಿಲ್ಲೆಯ ಮಾಲೂರಿನ ಖ್ಯಾತ ಜನಪದ ಗಾಯಕ ಶ್ರೀ ಪಿಚ್ಚಳ್ಳಿ ಶ್ರೀನಿವಾಸ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಾಗಂದಿಗೆ ವೇದಿಕೆಯಲ್ಲಿ ದಿನಾಂಕ 2014ರ ಜನವರಿ 31ರಂದು ಶುಕ್ರವಾರ ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-15 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಾಗತೀಕರಣದ ಸಂದರ್ಭದಲ್ಲಿ ಮೂಲ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳು ಕಳೆದುಹೋಗುತ್ತಿವೆ. ಇಂತಹ ಸಂದಿಗ್ಧತೆಯಲ್ಲಿಯೂ ಬಾಳಿ-ಬದುಕುತ್ತಿರುವ ಕಲಾವಿದರು, ಲಾಭದ ಆಸೆಗೆ ಒಳಗಾಗದೇ ಮೂಲ ಜನಪದ ಕಲೆಯನ್ನು ಉಳಿಸಿಕೊಳ್ಳಲು ಅಚಲವಾದ ನಿರ್ಧಾರ ಮತ್ತು ನಿಷ್ಠೆ ತೋರಬೇಕು. ಅಂದಾಗ ಮಾತ್ರ ನಮ್ಮ ಪರಂಪರಾಗತ ಕಲೆಗಳು ಉಳಿಯಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು. ನಾಡಿನ ಎಲ್ಲ ಪ್ರದೇಶದ ಎಲ್ಲ ಪ್ರಕಾರಗಳ ಜನಪದ ಕಲಾವಿದರನ್ನು ಆಹ್ವಾನಿಸುವ ಮೂಲಕ ಜಾನಪದ ವಿ.ವಿ.ಯು ನಿಜವಾದ ಅರ್ಥದಲ್ಲಿ ಮೂಲ ಜನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಮೂಲ ಕಲಾವಿದರಿಂದಲೇ ಜನಪದ ಕಲೆಗಳು ಉಳಿದು, ಬೆಳೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಮೂಲ ಕಲಾವಿದರಲ್ಲಿ ಅವರ ಬದುಕಿನ ಭಾಗವಾಗಿರುವ ಕಲೆಗಳ ಬಗ್ಗೆ ನಿಷ್ಠೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವುದೇ ವಿಶ್ವವಿದ್ಯಾಲಯದ ಮಹತ್ವದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪಿಚ್ಚಳ್ಳಿ ಶ್ರೀನಿವಾಸ ಅವರ ನೇತೃತ್ವದ ತಂಡದ ಶ್ರೀ ವೆಂಕಟೇಶ್, ಶ್ರೀ ಮಂಜು, ಶ್ರೀ ನಾಗರಾಜ, ಶ್ರೀ ರವಿ ಜನಪದ ಗೀತೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಜನಪದ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಿ.ಬಿ ನಾಯಕ, ಮೌಲ್ಯಮಾಪನ ಕುಲಸಚಿವ ಮತ್ತು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರೂ ಆದ ಪ್ರೊ. ಸ.ಚಿ. ರಮೇಶ, ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರರಾದ ಶ್ರೀ ಕೆ.ಎನ್. ಚಂದು ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಶ್ರೀ ಕೆ.ಎಲ್. ಲಕ್ಷ್ಮಣ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ (ತಾತ್ಕಾಲಿಕ) ಶ್ರೀ ಯತೀಶ್ ಎಲ್. ಕೊಡಾವತ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ (ತಾತ್ಕಾಲಿಕ) ಶ್ರೀಮತಿ ವಿಜಯಲಕ್ಷ್ಮೀ ಗೇಟಿಯವರ ನಿರೂಪಿಸಿದರು. ಯೋಜನಾ ಸಹಾಯಕ ಶ್ರೀ ಎಚ್.ಕೆ ಅರುಣಕುಮಾರ್ ವಂದಿಸಿದರು.


ಪಟ್ಟಾಂಗ-14
ತಿಂಗಳ ಅತಿಥಿ : ಕಲೆಗೆ ಯಾವುದೇ ಗಡಿ- ಪ್ರಾಂತ್ಯಗಳ ಹಂಗು ಇಲ್ಲ : ಶ್ರೀ ರವಿರಾಜ ಪನೆಯಾಲ ಪ್ರತಿಪಾದನೆ

ಕಲೆಗೆ ಯಾವುದೇ ಗಡಿ- ಪ್ರಾಂತ್ಯಗಳ ಹಂಗು ಇಲ್ಲ : ಶ್ರೀ ರವಿರಾಜ ಪನೆಯಾಲ ಪ್ರತಿಪಾದನೆ

ಗೊಟಗೋಡಿ/ ಶಿಗ್ಗಾವಿ : ಯಾವುದೇ ಒಂದು ಕಲೆ ವರ್ತಮಾನದ ವಿದ್ಯಮಾನಗಳಿಗೆ ತೆದುಕೊಂಡೂ, ಮೂಲವನ್ನು ಉಳಿಸಿಕೊಳ್ಳಬೇಕು ಎಂದು ಕಾಸರಗೋಡು ಜಿಲ್ಲೆಯ ಕಿನ್ನಿಂಗಾರು ಗ್ರಾಮದ ಪ್ರಸಿದ್ಧ ತೆಂಕುತಿಟ್ಟು ಯಕ್ಷಗಾನ ಕಲಾವಿದರಾದ ಶ್ರೀ ರವಿರಾಜ ಪನೆಯಾಲ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2013ರ ಡಿಸೆಂಬರ್ 31ರಂದು ಮಂಗಳವಾರ ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-14 ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಕ್ಷಗಾನ ಕಲೆಯಲ್ಲಿ ಪಠ್ಯಗಳನ್ನು ಅರ್ಥೈಸುವಾಗ ಮೂಲ ಪದ್ಯಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಎಚ್ಚರವಹಿಸುವುದು ಅವಶ್ಯವಿದೆ. ಕೇವಲ ಹಣಸಂಪಾದನೆಗೆ ಕಲೆಯನ್ನು ಕಲಿತುಕೊಳ್ಳುವುದಕ್ಕಿಂತ ಅದನ್ನೊಂದು ಕಲೆಯಾಗಿ ಸ್ವೀಕರಿಸಿ, ಪ್ರಸ್ತುತಪಡಿಸಬೇಕು. ಆಗ ಮಾತ್ರ ಯಕ್ಷಗಾನ ಕಲೆ ಉಳಿಯಲು ಮತ್ತು ಬೆಳೆಯಲು ಸಾಧ್ಯ ಎಂದ ಅವರು, ಕಲೆಗೆ ಯಾವುದೇ ಗಡಿ- ಪ್ರಾಂತ್ಯಗಳ ಹಂಗು ಇಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಯಕ್ಷಗಾನ ಕಲೆಯನ್ನೇ ಉಂಡುಟ್ಟು, ಉಸಿರಾಡುವಂತಹ ಕಲಾವಿದರಿಗೆ ಜೀವವಿಮೆ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರ, ಸಂಘ-ಸಂಸ್ಥೆಗಳು ಒದಗಿಸಿಕೊಡಬೇಕು. ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾಲಯವು ನಾಡಿನ ಪ್ರತಿ ಜಿಲ್ಲೆಯಲ್ಲಿ ಕಲಿಕಾಕೇಂದ್ರಗಳನ್ನು ಆರಂಭಿಸುವ ಮೂಲಕ ಯಕ್ಷಗಾನ ಸೇರಿದಂತೆ ಪಾರಂಪರಿಕ ಕಲೆಗಳನ್ನು ಸಂರಕ್ಷಿಸಿ, ಸಂವರ್ಧಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಿ.ಬಿ. ನಾಯಕ ಅವರು, ಮೌಲ್ಯಮಾಪನ ಕುಲಸಚಿವರು ಮತ್ತು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರಾದ ಪ್ರೊ. ಸ.ಚಿ. ರಮೇಶ ಅವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರವಿರಾಜ ಪನೆಯಲ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ವಿಶ್ವವಿದ್ಯಾಲಯದ ವಿದ್ಯಾಕುಮಾರ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಎಂ.ಬಿ.ಎ. ವಿಭಾಗದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಕಾಶ ಹೊಸಮನಿ ವಂದಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾದ ಡಾ. ಭಾರತಿ ಮರವಂತೆ ಕಾರ್ಯಕ್ರಮ ನಿರೂಪಿಸಿದರು.
ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ರವಿರಾಜ ಪನೆಯಾಲ ಅವರ ನೇತೃತ್ವದಲ್ಲಿ 'ಸುಧನ್ವಮೋಕ್ಷ' ತಾಳಮದ್ದಲೆ ಪ್ರಸಂಗವನ್ನು ಪ್ರಸ್ತುತ ಪಡಿಸಲಾಯಿತು.
ಹಿಮ್ಮೇಳದಲ್ಲಿ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರೀ, ಗೋಪಾಲಕೃಷ್ಣ ನಾವಡ ಹಾಗೂ ಲಕ್ಷ್ಮೀಶ ಬೇಂಗ್ರೋಡಿ ಸಾಥ್ ನೀಡಿದರು. ಮುಮ್ಮೇಳದಲ್ಲಿ ಹಂಸಧ್ವಜ ಪಾತ್ರದಲ್ಲಿ ಡಾ. ಕೆ. ಕಮಲಾಕ್ಷ, ಸುಧನ್ವ ಪಾತ್ರದಲ್ಲಿ ಶ್ರೀ ರವಿರಾಜ ಪನಯಾಲ, ಪ್ರಭಾವತಿ ಪಾತ್ರದಲ್ಲಿ ಶ್ರೀ ಗಣಪತಿಭಟ್ ಸಂಕದಗುಂಡಿ, ಅರ್ಜುನ ಪಾತ್ರದಲ್ಲಿ ಶ್ರೀ ರಾಧಾಕೃಷ್ಣ ಕಲ್ಚಾರು ಹಾಗೂ ಶ್ರೀಕೃಷ್ಣನ ಪಾತ್ರದಲ್ಲಿ ಶ್ರೀ ಸದಾಶಿವ ಆಳ್ವ ತಲಪಾಡಿ ಅವರು ಸುಧನ್ವಮೋಕ್ಷ ಪ್ರಸಂಗವನ್ನು ಅತ್ಯಂತ ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಪ್ರದರ್ಶನ ನೀಡಿದ ಎಲ್ಲ ಕಲಾವಿದರನ್ನು ವಿಶ್ವವಿದ್ಯಾಲಯದ ವತಿಯಿಂದ ಸ್ಮರಣಿಕೆ ನೀಡಿ, ಗೌರವಿಸಲಾಯಿತು. ಕಾರ್ಯಕ್ರಮವನ್ನು ಡಾ. ಕೆ. ಕಮಲಾಕ್ಷ ಅವರು ಸಂಯೋಜಿಸಿ, ನಿರ್ವಹಿಸಿದರು


ಪಟ್ಟಾಂಗ-13
ತಿಂಗಳ ಅತಿಥಿ : ಜೋಗತಿ ಸಮುದಾಯಕ್ಕೆ ಆತ್ಮವಿಶ್ವಾಸದ ಬದುಕು ಕೊಡಿ: ಮಂಜಮ್ಮ ಜೋಗತಿ

ಜೋಗತಿ ಸಮುದಾಯಕ್ಕೆ ಆತ್ಮವಿಶ್ವಾಸದ ಬದುಕು ಕೊಡಿ: ಮಂಜಮ್ಮ ಜೋಗತಿ

ಗೊಟಗೋಡಿ/ ಶಿಗ್ಗಾವಿ : ಸಮಾಜ, ಸರ್ಕಾರ ನಮ್ಮನ್ನು ನಿರ್ಲಕ್ಷಿಸದೆ, ಮನುಷ್ಯರಂತೆ ಕಂಡರೆ ಸಾಕು ಎನ್ನುವುದು ಖ್ಯಾತ ಜೋಗತಿ ನೃತ್ಯ ಕಲಾವಿದೆ ಬಿ. ಮಂಜಮ್ಮ ಜೋಗತಿ ಅವರ ಮನದಾಳದ ಮಾತು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2013ರ ನವ್ಹೆಂಬರ್ 30 ರಂದು ಶನಿವಾರ ಆಯೋಜಿಸಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-13 ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

'ಸಮಾಜದಲ್ಲಿ ಹೆಣ್ಣೂ ಅಲ್ಲದ ಗಂಡೂ ಅಲ್ಲದ ನಮ್ಮಂತವರು ಭಿಕ್ಷಾಟನೆ ಮಾಡುತ್ತಲೇ ಬದುಕುತ್ತಿದ್ದೇವೆ. ನಮ್ಮ ಬದುಕಿಗೆ ಜೋಗತಿ ಕಲೆಯೇ ಆಧಾರ. ಇದನ್ನು ನಂಬಿ ಬದುಕುತ್ತಿರುವ ಜೋಗತಿ ಸಮುದಾಯದವರನ್ನು ಅಂತಃಕರಣದಿಂದ ಕಾಣುವುದರ ಜೊತೆಗೆ ಸರ್ಕಾರ, ಸಂಘ-ಸಂಸ್ಥೆಗಳು ನಮಗೂ ಎಲ್ಲರಂತೆ ಜೀವನ ನಡೆಸಲು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿಕೊಡಬೇಕು' ಎಂದು ಮಂಜಮ್ಮ ಜೋಗತಿ ಅಳಲು ತೋಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಲಾವಿದರಿಗೆ ಯಾವುದೇ ರೂಪ ಮುಖ್ಯವಲ್ಲ. ಅವರಲ್ಲಿನ ಕಲೆ ಮುಖ್ಯ. ಆದ್ದರಿಂದ ಜೋಗತಿ ಸಂಪ್ರದಾಯದ ಮೂಲ ಕಲಾವಿದರನ್ನು ಗುರುತಿಸಿ, ಗೌರವಿಸಿದರೆ ಮಾತ್ರ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಈ ಮೂಲಕ ಜೋಗತಿ ಕಲೆಯು ಮೂಲ ಸ್ವರೂಪದಲ್ಲಿ ಉಳಿಯಲು ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು, ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೋಗತಿ ನೃತ್ಯ ಕಲಾವಿದರಾದ ಮಂಜಮ್ಮ ಜೋಗತಿ ಹಾಗೂ ಅವರ ತಂಡದ ಸದಸ್ಯರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಶ್ರೀ ಎನ್. ಮೋಹನಕುಮಾರ್ ಮತ್ತು ಶ್ರೀ ಕೆ.ಎಲ್. ಲಕ್ಷ್ಮಣ ಪ್ರಾರ್ಥಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಎಂ.ಬಿ.ಎ. ವಿಭಾಗದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಜಯದತ್ತ ಎಸ್. ಕಾರ್ಯಕ್ರಮ ನಿರೂಪಿಸಿದರು. ಶ್ರೀ ಪ್ರಕಾಶ ಹೊಸಮನಿ ವಂದಿಸಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಿ.ಬಿ. ನಾಯಕ, ಮೌಲ್ಯಮಾಪನ ಕುಲಸಚಿವರು ಮತ್ತು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರಾದ ಪ್ರೊ. ಸ.ಚಿ. ರಮೇಶ, ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ ಸದಸ್ಯರೂ ಜಾನಪದ ತಜ್ಞರೂ ಆದ ಶ್ರೀಮತಿ ಶಾಂತಿ ನಾಯಕ, ಡಾ. ಕೆ. ಸೌಭಾಗ್ಯವತಿ, ಜರ್ಮನಿಯ ವೂರ್ಗ್ಸ್ ಬರ್ಗ್ ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿ ಸಾರಾ ಮಾರ್ಕ್ಲಿ, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.


ಪಟ್ಟಾಂಗ-12
ತಿಂಗಳ ಅತಿಥಿ : ಜನಪದ ವೈದ್ಯಪದ್ಧತಿ ಹಣಸಂಪಾದನೆಗೆ ಇರುವ ಉದ್ಯೋಗವಲ್ಲ : ಶ್ರೀ ಶಿವಣ್ಣಗೌಡ ಪ್ರತಿಪಾದನೆ

ಜನಪದ ವೈದ್ಯಪದ್ಧತಿ ಹಣಸಂಪಾದನೆಗೆ ಇರುವ ಉದ್ಯೋಗವಲ್ಲ : ಶ್ರೀ ಶಿವಣ್ಣಗೌಡ ಪ್ರತಿಪಾದನೆ

ಗೊಟಗೋಡಿ/ ಶಿಗ್ಗಾವಿ : ಜನಪದ ವೈದ್ಯ ಹಣಸಂಪಾದನೆಗೆ ಇರುವ ಉದ್ಯೋಗವಲ್ಲ. ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಪಾರಂಪರಿಕ ವೈದ್ಯಪದ್ಧತಿ ಹೆಚ್ಚು ಜನೋಪಯೋಗಿಯಾಗಲು ಸಾಧ್ಯ ಎಂದು ಶಿವಮೊಗ್ಗ ಜಿಲ್ಲೆಯ ಮಂಗಳ ಗ್ರಾಮದ ಖ್ಯಾತ ಜನಪದ ಮೂಳೆತಜ್ಞರಾದ ಶ್ರೀ ಶಿವಣ್ಣಗೌಡ ಎಂ.ಬಿ. ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ ದಿನಾಂಕ ಅಕ್ಟೋಬರ್ 24, 2013ರಂದು ಗುರುವಾರ ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-12 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮೂಳೆಮುರಿತ, ಸ್ನಾಯುಸೆಳೆತ ರೋಗಗಳಿಗೆ ಔಷಧಿ ಕೊಡುವ ಕಾಯಕದಲ್ಲಿ ನಿರತವಾಗಿದ್ದು, ಈ ವೈದ್ಯಪದ್ಧತಿಯನ್ನು ಕಲಿಯಲು ಯುವಕರಿಗೆ ಆಸಕ್ತಿ, ಅಭಿರುಚಿ ಇರಬೇಕು ಎಂದು ಕಿವಿಮಾತು ಹೇಳಿದ ಅವರು, ಜನಪದರ ಜ್ಞಾನಪದ್ಧತಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಶ್ರೀ ಶಿವಣ್ಣಗೌಡ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು, ಆಧುನಿಕ ವೈದ್ಯಪದ್ಧತಿಗಳ ನಡುವೆ ಪಾರಂಪರಿಕ ವೈದ್ಯಪದ್ಧತಿಗಳು ಹಿನ್ನೆಲೆಗೆ ಸರಿಯುತ್ತಿದ್ದು, ಅನುಭವಿ ವೈದ್ಯತಜ್ಞರು ತಮ್ಮಲ್ಲಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಪ್ರಯತ್ನಿಸಿದಾಗ ಮಾತ್ರ ಪಾರಂಪರಿಕ ವೈದ್ಯಪದ್ಧತಿಗಳು ಉಳಿದು, ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಿ.ಬಿ ನಾಯಕ ಅವರು ಸಂವಾದಕ್ಕೆ ಚಾಲನೆ ನೀಡುತ್ತ ಮಾತನಾಡಿ ದೇಹದ ಅಗತ್ಯಗಳಿಗೆ ತಕ್ಕಂತೆ ಔಷಧಿಗಳನ್ನು ಕೊಡುವ ಪದ್ಧತಿ, ಮೂಲ ಜ್ಞಾನವನ್ನು ಗೌಪ್ಯವಾಗಿಡುವುದು ಇತ್ಯಾದಿ ಕಾರಣಗಳಿಂದ ಪಾರಂಪರಿಕ ವೈದ್ಯಪದ್ಧತಿಗಳು ಕಣ್ಮೆರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜಾಗತೀಕರಣದ ಸಂದರ್ಭದಲ್ಲಿ ಪಾರಂಪರಿಕ ವೈದ್ಯಪದ್ಧತಿಗಳನ್ನು ಪೋಷಿಸುವ ಅಗತ್ಯವಿದೆ ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ವೈದ್ಯವು ಅನುಭವಜನ್ಯವಾದುದು. ಘನತೆಯಿಂದ ಕೂಡಿದ ಮೂಲ ನಾಟಿವೈದ್ಯಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವ ಶ್ರೀ ಶಿವಣ್ಣಗೌಡ ಅವರಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ವೇದಿಕೆ ಮೇಲೆ ಶ್ರೀ ಎಂ.ಬಿ. ಶಿವಣ್ಣಗೌಡ ಅವರ ಪುತ್ರ ಶ್ರೀಕಾಂತ ಅವರು ಉಪಸ್ಥಿತ ಇದ್ದು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.
ಜನಪದ ವೈದ್ಯ ಶ್ರೀ ಶಿವಣ್ಣಗೌಡ ಎಂ.ಬಿ. ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಶ್ರೀ ಕೆ.ಎಲ್. ಲಕ್ಷ್ಮಣ ಪ್ರಾರ್ಥಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಮರವಂತೆ ನಿರೂಪಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮೀ ಗೇಟಿಯವರ ವಂದಿಸಿದರು.
ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ಚಂದ್ರಪೂಜಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ಚಂದು, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ, ಡಾ. ಶ್ರೀಶೈಲ ಹುದ್ದಾರ, ರಂಭಾಪುರಿ ಕಾಲೇಜು ಆಡಳಿತಾಧಿಕಾರಿ ಶ್ರೀ ವಿಶ್ವನಾಥ ಕಂಬಾಳಿಮಠ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀ ಬಸವರಾಜ ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


ಪಟ್ಟಾಂಗ-11
ತಿಂಗಳ ಅತಿಥಿ : ಕಿನ್ನಾಳ ಕಲೆಗೆ ಪೂರ್ಣ ಪ್ರಮಾಣದ ಕಾಯಕಲ್ಪ ಅಗತ್ಯ : ಕಲಾವಿದ ಶ್ರೀ ಸೋಮಣ್ಣ ವ್ಹಿ. ಚಿತ್ರಗಾರ ಪ್ರತಿಪಾದನೆ

ಕಿನ್ನಾಳ ಕಲೆಗೆ ಪೂರ್ಣ ಪ್ರಮಾಣದ ಕಾಯಕಲ್ಪ ಅಗತ್ಯ : ಕಲಾವಿದ ಶ್ರೀ ಸೋಮಣ್ಣ ವ್ಹಿ. ಚಿತ್ರಗಾರ ಪ್ರತಿಪಾದನೆ

ಗೊಟಗೋಡಿ/ ಶಿಗ್ಗಾವಿ : ನಾಡಿನ ಅಪ್ಪಟ ಜನಪದ ಕಲೆಯಾದ ಕಿನ್ನಾಳ ಕಲೆ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಅಲ್ಪಸ್ವಲ್ಪ ಉಸಿರಾಡುತ್ತಿದ್ದು, ಕಿನ್ನಾಳ ಕಲೆಗೆ ಪೂರ್ಣ ಪ್ರಮಾಣದ ಕಾಯಕಲ್ಪ ಒದಗಿಸುವ ಅವಶ್ಯಕತೆ ಇದೆ ಎಂದು ಖ್ಯಾತ ಕಲಾವಿದ ಶ್ರೀ ಸೋಮಣ್ಣ ವ್ಹಿ. ಚಿತ್ರಗಾರ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಸೆಪ್ಟಂಬರ್ 30ರಂದು ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-11 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಐತಿಹಾಸಿಕವಾಗಿ ಪ್ರಸಿದ್ಧಿ ಹೊಂದಿದ ಕಿನ್ನಾಳ ಕಲೆಯು ಜಗತ್ಪ್ರಸಿದ್ಧವಾಗಿದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕಿನ್ನಾಳ ಕಲೆಯನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಕಲಿತು ಮುಂದುವರೆಸಿಕೊಂಡು ಹೋಗುತ್ತಿದ್ದರು. ಆದರೆ ಇಂದಿನ ಯುವ ಪೀಳಿಗೆಯವರಲ್ಲಿ ಕಿನ್ನಾಳ ಕಲೆಯನ್ನು ಕಲಿತುಕೊಳ್ಳುವ ವ್ಯವಧಾನ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಿನ್ನಾಳ ಕಲೆಯನ್ನೇ ನಂಬಿ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಅನುಕೂಲ ಕಲ್ಪಿಸಬೇಕು ಎಂದು ಶ್ರೀ ಸೋಮಣ್ಣ ವ್ಹಿ. ಚಿತ್ರಗಾರ ಅವರು ಮನವಿ ಮಾಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು, ನಾಡಿನ ಅನನ್ಯ ಕಲೆಯಾದ ಕಿನ್ನಾಳ ಕಲೆಯನ್ನು ಪರಂಪರಾಗತವಾಗಿ ಮುಂದುವರೆಸಿಕೊಂಡು ಜಗದ್ವಿಖ್ಯಾತಗೊಳಿಸುತ್ತಿರುವ ಶ್ರೀ ಸೋಮಣ್ಣ ಚಿತ್ರಗಾರ ಅವರ ಸಾಧನೆ ಅಭಿನಂದನೀಯ. ನಾಡಿನಾದ್ಯಂತ ವಿಶೇಷ ತರಬೇತಿ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಂಸ್ಕೃತಿ ನಿಷ್ಠವಾದ ಕಿನ್ನಾಳ ಕಲೆಯನ್ನು ಉಳಿಸಿ, ಬೆಳೆಸುವ ಅವರ ಕಾರ್ಯಕ್ಕೆ ಸಮಾಜದಿಂದ ಸೂಕ್ತ ಸಹಕಾರ ಅಗತ್ಯ ಎಂದು ತಿಳಿಸಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಿ.ಬಿ. ನಾಯಕ ಅವರು ಮಾತನಾಡಿ ಪರಂಪರಾಗತ ಜ್ಞಾನ, ಕಲೆಗಳು ತೆರೆಮರೆಗೆ ಸರಿಯುತ್ತಿರುವ ಇಂದಿನ ಸಂಕೀರ್ಣ ಸಂದರ್ಭದಲ್ಲಿ ದೇಸೀ ಕಲೆಯಾಗಿರುವ ಕಿನ್ನಾಳ ಕಲೆಯ ಅನನ್ಯತೆಯನ್ನು ಉಳಿಸಿಕೊಳ್ಳುವುದು ಅವಶ್ಯಕತೆ ಇದೆ ಎಂದು ಹೇಳಿದರು.


ಪಟ್ಟಾಂಗ-10
ತಿಂಗಳ ಅತಿಥಿ : ಶ್ರೀ ಗುರುಶಾಂತಪ್ಪ ಅವರು, ಪ್ರಸಿದ್ಧ ಜನಪದ ವೈದ್ಯರು, ಕುಂಕೂರು

ಪಾರಂಪರಿಕ ವೈದ್ಯ ಪದ್ಧತಿಗಳನ್ನು ಉಳಿಸಿಕೊಳ್ಳುವುದು ಅವಶ್ಯ : ಶ್ರೀ ಗುರುಶಾಂತಪ್ಪ

ಗೊಟಗೋಡಿ/ ಶಿಗ್ಗಾವಿ : ಪಾರಂಪರಿಕ ವೈದ್ಯ ಪದ್ಧತಿಯನ್ನು ಯುವಜನಾಂಗಕ್ಕೆ ಕಲಿಸಿ ಕೊಡಲು ಸೂಕ್ತ ತರಬೇತಿ ಅತ್ಯಗತ್ಯ ಎಂದು ಕುಂಕೂರಿನ ಖ್ಯಾತ ಜನಪದ ವೈದ್ಯ ಶ್ರೀ ಗುರುಶಾಂತಪ್ಪ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ ದಿನಾಂಕ ಆಗಸ್ಟ್ 30, 2013ರಂದು ಶುಕ್ರವಾರ ಆಯೋಜಿಸಲಾಗಿದ್ದ ತಿಂಗಳ ಅತಿಥಿಯೊಂದಿಗೆ ಪಟ್ಟಾಂಗ-10 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
'ಜನರ ಸೇವೆಯೇ ಜನಾರ್ಧನ ಸೇವೆ' ಎಂದು ನಂಬಿ ಈ ಕೆಲಸ ಮಾಡುತ್ತಿದ್ದು, ಇಡೀ ಕುಟುಂಬವೇ ಮೂಳೆ ಮುರಿತ ಸೇರಿದಂತೆ ಇತರೆ ಸಣ್ಣಪುಟ್ಟ ರೋಗಗಳಿಗೆ ಔಷಧಿ ಕೊಡುವ ಕಾಯಕದಲ್ಲಿ ನಿರತವಾಗಿದೆ. ಯುವ ಪೀಳಿಗೆ ಜನಪದ ವೈದ್ಯಪದ್ಧತಿಯನ್ನು ತಿಳಿದು ಮುಂದುವರೆಸಿಕೊಂಡು ಹೋಗುವುದು ಅವಶ್ಯ ಎಂದು ಗುರುಶಾಂತಪ್ಪ ಅವರು ತಿಳಿಸಿದರು.
ನೂತನ ಕುಲಸಚಿವರಾದ ಡಾ. ಡಿ.ಬಿ ನಾಯಕ ಅವರು ಮಾತನಾಡಿ, ವಾಣಿಜ್ಯೀಕರಣಗೊಳ್ಳುತ್ತಿರುವ ಇಂದಿನ ವೈದ್ಯಕೀಯ ಕ್ಷೇತ್ರದಲ್ಲಿ ಜನಪದ ವೈದ್ಯ ಪದ್ಧತಿಗಳನ್ನು ಉಳಿಸಿಕೊಳ್ಳುವುದು ಕಷ್ಟಸಾಧ್ಯ. ವೈದ್ಯರು ಈ ನಿಟ್ಟಿನಲ್ಲಿ ಯೋಚಿಸಿ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದರೆ ಮಾತ್ರ ಜನಪದ ವೈದ್ಯ ಪದ್ಧತಿಗಳು ಉಳಿದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು, ದೇಸೀ ಜ್ಞಾನಪರಂಪರೆಯನ್ನು ಸಂರಕ್ಷಿಸಿ ಸಂವರ್ಧನೆ ಮಾಡುವ ಉದ್ದೇಶದಿಂದ ವಿಶ್ವವಿದ್ಯಾಲಯ ವಿಶೇಷ ಕಾರ್ಯ ಮಾಡುತ್ತಿದೆ. ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಅಗತ್ಯತೆ ಇದೆ. ಈ ಸಂಬಂಧ ವಿಶ್ವವಿದ್ಯಾಲಯವು ಬೃಹತ್ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ ಎಂದು ತಿಳಿಸಿದರು.
ಜನಪದ ವೈದ್ಯ ಶ್ರೀ ಗುರುಶಾಂತಪ್ಪ ಸಣ್ಣಬಸಪ್ಪ ಸವಣೂರು ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಬಿ.ಆರ್. ದೇಶಪಾಂಡೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕುಮಾರ ಜಿ. ಸಣ್ಣಯ್ಯ ಪ್ರಾರ್ಥಿಸಿದರು. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಕುಮಾರಿ ಎಂ.ಬಿ. ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ.ಎ. ವಿಭಾಗದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಶ್ರೀ ಪ್ರಕಾಶ ಹೊಸಮನಿ ವಂದಿಸಿದರು.
ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ. ಚಂದ್ರಪೂಜಾರಿ, ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕೆರೆಮತ್ತಿಹಳ್ಳಿ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ್, ಪ್ರಾಧ್ಯಾಪಕರಾದ ಡಾ. ನಿಂಗಪ್ಪ ಮುದೇನೂರು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ. ಹರಿಲಾಲ ಪವಾರ, ಜಾನಪದ ವಿ.ವಿ. ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ, ಜನಪದ ವೈದ್ಯರಾದ ಶ್ರೀ ಗುರುಶಾಂತಪ್ಪ ಕುಟುಂಬವರ್ಗದವರು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಜರಿದ್ದರು.


ಪಟ್ಟಾಂಗ-9
ತಿಂಗಳ ಅತಿಥಿ : ಶ್ರೀ ಹುಸೇನ್ ಸಾಹೇಬ್ ಷರೀಫನವರ್, ಷರೀಫರ ಸಂತತಿಯ ತತ್ವಪದಕಾರ

ಶ್ರೀ ಹುಸೇನ್ ಸಾಹೇಬ್ ಷರೀಫನವರ್, ಷರೀಫರ ಸಂತತಿಯ ತತ್ವಪದಕಾರ


ಪಟ್ಟಾಂಗ-8
ತಿಂಗಳ ಅತಿಥಿ : ಶ್ರೀ ವಿದ್ವಾನ್ ಕ.ನ.ದಾಸಾಚಾರ್ ಅವರು, ಮೂಡಲಪಾಯ ಯಕ್ಷಗಾನ ಭಾಗವತರು, ಮುನಿಯೂರು, ತುಮಕೂರು ಜಿಲ್ಲೆ

ಶ್ರೀ ವಿದ್ವಾನ್ ಕ.ನ.ದಾಸಾಚಾರ್ ಅವರು, ಮೂಡಲಪಾಯ ಯಕ್ಷಗಾನ ಭಾಗವತರು, ಮುನಿಯೂರು, ತುಮಕೂರು ಜಿಲ್ಲೆ


ಪಟ್ಟಾಂಗ-6
ತಿಂಗಳ ಅತಿಥಿ : ಡಾ.ಪಿ.ಕೆ. ರಾಜಶೇಖರ, ಖ್ಯಾತ ಜನಪದ ಗಾಯಕರು ಮತ್ತು ಸಂಶೋಧಕರು

ಡಾ.ಪಿ.ಕೆ. ರಾಜಶೇಖರ, ಖ್ಯಾತ ಜನಪದ ಗಾಯಕರು ಮತ್ತು ಸಂಶೋಧಕರು


ಪಟ್ಟಾಂಗ-5
ತಿಂಗಳ ಅತಿಥಿ : ಶ್ರೀ ಅಪ್ಪಗೆರೆ ತಿಮ್ಮರಾಜು, ಖ್ಯಾತ ಜನಪದ ಗಾಯಕರು

ಶ್ರೀ ಅಪ್ಪಗೆರೆ ತಿಮ್ಮರಾಜು, ಖ್ಯಾತ ಜನಪದ ಗಾಯಕರು


ಪಟ್ಟಾಂಗ-4
ತಿಂಗಳ ಅತಿಥಿ : ಶ್ರೀ ಉಸ್ತಾದ್ ಹುಮಾಯುನ್ ಹರ್ಲಾಪುರ, ಖ್ಯಾತ ಹಿಂದುಸ್ಥಾನಿ ಗಾಯಕರು, ಶಿವಮೊಗ್ಗ ಜಿಲ್ಲೆ

ಶ್ರೀ ಉಸ್ತಾದ್ ಹುಮಾಯುನ್ ಹರ್ಲಾಪುರ, ಖ್ಯಾತ ಹಿಂದುಸ್ಥಾನಿ ಗಾಯಕರು, ಶಿವಮೊಗ್ಗ ಜಿಲ್ಲೆ


ಪಟ್ಟಾಂಗ-3
ಕಲೆಗಳ ಜೀವಂತಿಕೆಗೆ ನಿಷ್ಠೆ ಮತ್ತು ಶ್ರದ್ಧೆ ಅವಶ್ಯಕ : ಬುರ್ರಕಥಾ ಜಯಮ್ಮ

ಕಲೆಗಳ ಜೀವಂತಿಕೆಗೆ ನಿಷ್ಠೆ ಮತ್ತು ಶ್ರದ್ಧೆ ಅವಶ್ಯಕ : ಬುರ್ರಕಥಾ ಜಯಮ್ಮ


ಪಟ್ಟಾಂಗ-2
ಕಲೆ ಮತ್ತು ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ : ಬೆಳಗಲು ವೀರಣ್ಣ

ಕಲೆ ಮತ್ತು ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ : ಬೆಳಗಲು ವೀರಣ್ಣ


ಪಟ್ಟಾಂಗ-1
ಕಲೆಯನ್ನು ಶ್ರದ್ಧೆ ಗೌರವದಿಂದ ಕಾಣಬೇಕು. : ಶ್ರೀ ಶಿವನಗೌಡ್ರ

ಕಲೆಯನ್ನು ಶ್ರದ್ಧೆ ಗೌರವದಿಂದ ಕಾಣಬೇಕು. : ಶ್ರೀ ಶಿವನಗೌಡ್ರ

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India