ಯೋಜನೆಗಳು > ಸಂಶೋಧನಾ ಯೋಜನೆಗಳು
 

ಗ್ರಾಮ ಚರಿತ್ರೆ ಕೋಶ
ನಮ್ಮ ನಾಡಿನ ದೇಸೀ ಪರಿಸರವನ್ನು ಅದರ ಮೂಲ ಆಕರಗಳೊಂದಿಗೆ ಸಂಗ್ರಹಿಸಿ, ದಾಖಲಿಸಿ ಸಂರಕ್ಷಿಸುವ ಉದ್ದೇಶವೇ ಗ್ರಾಮ ಚರಿತ್ರೆ ಕೋಶ ಯೋಜನೆ. ಈ ಯೋಜನೆಯ ವ್ಯಾಪ್ತಿಯೊಳಗೆ ದೇಸಿ ಪರಿಸರದಲ್ಲಿ ಬರುವ ಗ್ರಾಮಗಳು ನಮ್ಮ ಸಾಂಸ್ಕೃತಿಕ ಕಣಜಗಳು. ಅಲ್ಲಿನ ಜೀವಸಂಕುಲ, ಪ್ರಾಕೃತಿಕ ಬದುಕಿನ ಜೀವ ದ್ರವ್ಯಗಳು, ಭಾಷಾ ಬಳಕೆ ಮತ್ತು ಅಭಿವೃದ್ಧಿಯ ವಿಶಿಷ್ಟ ರೂಪಗಳು, ಎಲ್ಲವೂ ಮಹತ್ವದ ಸಂಗತಿಗಳೇ ಆಗಿರುತ್ತವೆ. ಈ ನಾಡಿನ ಗ್ರಾಮಗಳಲ್ಲಿ ಇತಿಹಾಸವಿದೆ, ಸಂಪ್ರದಾಯ-ಧರ್ಮಗಳಿವೆ, ಮನೆ-ಮಠಗಳಿವೆ, ಮೌಲ್ಯ-ಮೌಢ್ಯಗಳಿವೆ, ಶಿಕ್ಷಣ-ಆಡಳಿತಗಳ ಚರಿತ್ರೆಗಳಿವೆ. ಈ ಎಲ್ಲ ಹಳತು-ಹೊಸತುಗಳ ಸಮ್ಮಿಶ್ರಣದಿಂದ ನಮ್ಮ ಗ್ರಾಮಗಳು ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡಿವೆ. ಇವು ಕೇವಲ ಜನ ವಸತಿಗಳಲ್ಲ; ಜನಸಂಸ್ಕೃತಿಯ ವೈವಿಧ್ಯಪೂರ್ಣವಾದ ಘಟಕಗಳು ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಹಳ್ಳಿಗಳ ಸೊಗಡಿನ, ಸಾಂಸ್ಕೃತಿಕತನವನ್ನು ಸಂಗ್ರಹಿಸಿಡದೆ ಹೋದರೆ, ಉಳಿಸಿಕೊಳ್ಳದೆ ಹೋದರೆ ಭಾಷಾ ಬಳಕೆಯಲ್ಲಿ ಆಗಿರುವ ಕಾಲಮಾನದ ವೈಶಿಷ್ಟ್ಯ ಮತ್ತು ಪ್ರಯೋಗಶೀಲತೆಗಳನ್ನು ಗುರುತಿಸದೆ ಹೋದರೆ ನಮ್ಮ ನಾಡ ಬದುಕಿನ ಅಂತಃಸ್ಸತ್ವವನ್ನೇ ಕಳೆದುಕೊಂಡು ಬಿಡುತ್ತೇವೆ. ಮುಂದಿನ ಪೀಳಿಗೆ ತನ್ನ ಮೂಲಸಂಸ್ಕೃತಿಯನ್ನೇ ಮರೆತು ಜಾಗತೀಕರಣದ ಮುಕ್ತ ಮಾರುಕಟ್ಟೆಯ ಅನ್ಯ ಸರಕನ್ನೇ ತನ್ನದೆಂದು ಭ್ರಮಿಸುವಂಥ ವ್ಯಕ್ತಿತ್ವ ನಾಶಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
ಕರ್ನಾಟಕದಲ್ಲಿ ಸುಮಾರು 36,000 ಗ್ರಾಮಗಳಿವೆ. ಒಟ್ಟು 30 ಜಿಲ್ಲೆಗಳು, 175 ತಾಲ್ಲೂಕುಗಳಿವೆ. ಪ್ರತಿ ತಾಲ್ಲೂಕಿನಲ್ಲಿ ಸರಾಸರಿ 120 ಕ್ಕೂ ಹೆಚ್ಚು ಗ್ರಾಮಗಳಿವೆ. ಪ್ರತಿ ಗ್ರಾಮದ ಸಮಗ್ರ ಚರಿತ್ರೆಯನ್ನು ಪುಟ ಮಿತಿಯಲ್ಲಿ ಅಡಕಗೊಳಿಸಿ ತಾಲೂಕು ಗ್ರಾಮ ಚರಿತ್ರೆ ಕೈಪಿಡಿಯನ್ನು ಸಿದ್ಧಪಡಿಸುವುದು. ಅವುಗಳನ್ನು ಕ್ರೋಡೀಕರಿಸಿ ಸಂಪಾದಿಸಿ, ವಿಶ್ಲೇಷಿಸಿ ಜಿಲ್ಲಾ ಗ್ರಾಮ ಚರಿತ್ರೆ ಸಂಪುಟಗಳನ್ನು ಸಿದ್ಧಪಡಿಸುವುದು ಈ ಯೋಜನೆಯ ಉದ್ದೇಶ. ಈ ಯೋಜನೆಗೆ ಡಾ.ಎಂ.ಎಂ. ಕಲಬುರ್ಗಿ ಹಾಗೂ ಕಾ.ತ. ಚಿಕ್ಕಣ್ಣನವರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ಅವರ ಮಾರ್ಗದರ್ಶನ - ಸಲಹೆಯಂತೆ ಪ್ರಶ್ನಾವಳಿಗಳನ್ನು ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯ ಗ್ರಾಮ ಸರ್ವೇಕ್ಷಣೆಯನ್ನು ಕೈಗೊಳ್ಳಲಾಗಿದೆ. ಈ ಜಿಲ್ಲೆಯ ಒಟ್ಟು 705 ಗ್ರಾಮಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿಡಲಾಗಿದೆ. ಅವುಗಳನ್ನು ಕೈಪಿಡಿ ರೂಪದಲ್ಲಿ ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿ ನಾಡಿನ ಜನತೆಗೆ ಸಮರ್ಪಿಸುವ ಉದ್ದೇಶ ವಿಶ್ವವಿದ್ಯಾಲಯದ್ದಾಗಿದೆ.


ಗ್ರಾಮ ಕರ್ನಾಟಕ - ಜಾನಪದ ವಸ್ತುಸಂಗ್ರಹಾಲಯ
ವಸ್ತುಸಂಗ್ರಹಾಲಯಗಳು ಮಾನವ ಬದುಕಿನ ಭೌತಿಕ ಸಾಕ್ಷಿರೂಪಗಳು ಹಾಗೂ ಪ್ರತೀಕಗಳು. ಮಾನವನು ಸಾಗಿ ಬಂದ ದಾರಿಯಲ್ಲಿ ಕಂಡುಕೊಂಡ ಜ್ಞಾನ-ವಿಜ್ಞಾನ ತಂತ್ರಜ್ಞಾನದ ಪ್ರಾತಿನಿಧಿಕ ರೂಪಗಳು. ಮಾನವನ ಅರಿವು ಸಾಗಿಬಂದ ಬೌದ್ಧಿಕ ಬೆಳವಣಿಗೆಯ ಜಾಡನ್ನು ಅಳೆಯಲು, ಅರಿಯಲು, ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅಗತ್ಯವಾಗಿ ಬೇಕಾಗಿರುವಂತಹದ್ದು ಆ ಪ್ರದೇಶದ ಆಕರ ಸಾಮಗ್ರಿಗಳು, ಸಾಧನ ಸಲಕರಣೆಗಳು, ಒಡವೆ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು, ಕೃಷಿ ಪರಿಕರಗಳು. ಅಲ್ಲದೆ ಇವು ಒಂದು ಕಾಲಘಟ್ಟದ, ಪ್ರದೇಶದ ಮಾನವನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನೇ ಬಿಂಬಿಸುತ್ತವೆ. ಈ ಮಹದುದ್ದೇಶದಿಂದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 'ಗ್ರಾಮ ಕರ್ನಾಟಕ' ಎಂಬ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಸಂಶೋಧಕರು ರಾಜ್ಯದ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಅಮೂಲ್ಯ ಜನಪದ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ವಸ್ತುಗಳನ್ನು ವಿಶ್ವವಿದ್ಯಾಲಯದ ಸುಮಾರು ಹತ್ತು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಿಷ್ಟ ವಾಸ್ತುಶೈಲಿಯಲ್ಲಿ ರೂಪಿಸಿದ ಬಯಲು ಆಲಯದಲ್ಲಿ ಸಂಗ್ರಹಿಸಿ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ವಿದ್ವಾಂಸರಿಗೆ ಅಧ್ಯಯನಯೋಗ್ಯವಾಗಿ ಪ್ರದರ್ಶಿಸುವುದು ವಿಶ್ವವಿದ್ಯಾಲಯದ ಹಂಬಲ. ಪ್ರಾಯೋಗಿಕವಾಗಿ ಹಾವೇರಿ ಜಿಲ್ಲೆಯ ಏಳು ತಾಲೂಕುಗಳ ಒಟ್ಟು 705 ಗ್ರಾಮಗಳ ಸರ್ವೇಕ್ಷಣಾ ಕಾರ್ಯವನ್ನು ಮುಗಿಸಿ 5000 ಕ್ಕೂ ಹೆಚ್ಚು ಅಮೂಲ್ಯವಾದ ಜನಪದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಈ ಯೋಜನೆಯನ್ನು ಅವಿಘ್ನವಾಗಿ ನಡೆಸಿಕೊಂಡು ಹೋಗಬೇಕೆಂಬುದು ವಿಶ್ವವಿದ್ಯಾನಿಲಯದ ಹಂಬಲ.


ಪ್ರಕಟಣಾ ಯೋಜನೆಗಳು
ಪ್ರಕಟಣೆಗಳು ಒಂದು ವಿಶ್ವವಿದ್ಯಾಲಯದ ಹೃದಯದ ಭಾಷೆಯಿದ್ದಂತೆ. ಪ್ರತಿಯೊಂದು ವಿಶ್ವವಿದ್ಯಾಲಯ ಅದರದೇ ಆದ ಪ್ರಕಟಣಾ ವಿಭಾಗವನ್ನು ಹೊಂದುವುದು ಅವಶ್ಯ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇದೀಗ ತಾನೇ ಪ್ರಾರಂಭವಾಗಿದ್ದು ಪ್ರಾರಂಭಿಕ ಗ್ರಂಥವಾಗಿ 'ಇಂದಿನ ಕನಸು ನಾಳಿನ ನನಸು' ಎಂಬ ಪ್ರಸ್ತಾಪವನ್ನು ಪ್ರಕಟಿಸಿದೆ. ಇದರಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವಿವಿಧ ತಜ್ಞರ ವಿಚಾರಗಳು ಹಾಗೂ ಭಾವನೆಗಳನ್ನು ಸಂಗ್ರಹಿಸಿ ಅವುಗಳನ್ನು ಪರಿಶೀಲಿಸಿ ಉತ್ತಮವಾದ ವಿಚಾರಗಳನ್ನು ಒಳಗೊಂಡ ಸಂಪಾದನಾ ಗ್ರಂಥ ಇದಾಗಿದ್ದು ಇದು ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯ ಚಟುವಟಿಕೆಗಳು ಹಾಗೂ ನಡೆಯಬೇಕಾದ ದಾರಿಯ ಕೈ ದೀವಿಗೆಯಂತಿದೆ. ವಿಶ್ವವಿದ್ಯಾಲಯ 2012-13 ರ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಾದ ತುಂಬ ದೀರ್ಘವಾದ ಪ್ರಕಟಣಾ ಯೋಜನೆಯನ್ನು ರೂಪಿಸಿದೆ.


ಕನ್ನಡ ಜಾನಪದ ನಿಘಂಟು ಯೋಜನೆ
ಕರ್ನಾಟಕ ಜಾನಪದ ಅಧ್ಯಯನ ನೆಲೆಯಲ್ಲಿ ಈಗಾಗಲೇ ಆಕರಗಳ ಸಂಗ್ರಹದ ಜೊತೆಜೊತೆಗೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಷಯ ವಿಶ್ಲೇಷಣೆ ಕಾರ್ಯ ಕೂಡ ಸಾಕಷ್ಟು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತಜ್ಞರ ನೆಲೆಯಲ್ಲಿ ಪದಗಳಿಗೆ ವ್ಯಾಖ್ಯಾನ, ನಿರ್ವಚನಗಳು ರೂಪುಗೊಳ್ಳುತ್ತಿದ್ದು ವಿದ್ವಾಂಸರಿಗೆ ಅಗತ್ಯ ಪ್ರಮಾಣದಲ್ಲಿ ವಿವಿಧ ಪ್ರಾದೇಶಿಕ ಭಿನ್ನತೆಗಳ ಅರಿವನ್ನು ಗ್ರಹಿಸಲು ಸೂಕ್ತ ಅವಕಾಶವಾಗುತ್ತಿದೆ. ಆದರೆ ಜನಪದರಿಗೆ ತಮ್ಮ ದನಿ ಪದಗಳಲೋಕದಲ್ಲಿ ತಾವೇ ಸೃಷ್ಟಿಸಿಕೊಂಡ ಪದಗಳು ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನ ಅರ್ಥ ನೀಡಬಹುದು ಅಥವಾ ಅದೇ ವಸ್ತು ವಿಷಯಗಳಿಗೆ ಬೇರೆ ಬೇರೆ ಪದಗಳು ಇರಬಹುದು ಎಂಬುದು ಅನೇಕ ಬಾರಿ ಗ್ರಹಿಕೆಗೆ ಮೀರಿದ ಸಂಗತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಜ್ಞಾನವೈವಿಧ್ಯಕ್ಕೆ ಹಾಗೂ ದೇಸಿ ನುಡಿ ಸಂಪತ್ತನ್ನು ಕುರಿತ ಮಾಹಿತಿಗಾಗಿ ನಮ್ಮ ಜನಪದರು ಕೂಡ ಬಳಸಲಿಕ್ಕೆ ಯೋಗ್ಯವಾದ 'ಕನ್ನಡ ಜಾನಪದ ನಿಘಂಟು' ಯೋಜನೆಯನ್ನು ಸಿದ್ಧಪಡಿಸಲು ಯೋಜಿಸಲಾಗಿದೆ. ಇದು ಈಗಾಗಲೇ ಕರ್ನಾಟಕ ಜಾನಪದ ಅಕಾಡೆಮಿ ಕೈಗೊಂಡಿರುವ ನಿಘಂಟಿಗಿಂತ ಭಿನ್ನವಾಗಿರುತ್ತದೆ. ಮೂಲತಃ ಈ ನಿಘಂಟು ಕೇವಲ 'ಪದಕೋಶ'ವಾಗದೆ ಜನಪದರಜ್ಞಾನ ಜಗತ್ತಿನ ಅನಾವರಣಕ್ಕೆ ಅವಕಾಶ ಕಲ್ಪಿಸುವ ಪದಗಳ ವಿವರಣೆಯನ್ನು ಹೊಂದಿರುತ್ತದೆ. ಈ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವನ್ನು ನಿರೀಕ್ಷಿಸಲಾಗಿದೆ.


ಕಿರು ಸಂಶೋಧನಾ ಯೋಜನೆ
ಜನಪದ ಸಮಾಜದ ವಿವಿಧ ಆಯಾಮಗಳು ಹಾಗೂ ಅವುಗಳ ಮಜಲುಗಳನ್ನು ಅನುಶೋಧಿಸುವ, ಬೋಧಿಸುವ ಹಾಗೂ ಜನಪದಸಂಸ್ಕೃತಿ ಹಾಗೂ ನಾಗರಿಕತೆಯನ್ನು ಸಂರಕ್ಷಿಸುವ, ಸಂವರ್ಧಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಜಿಲ್ಲೆಗೊಂದರಂತೆ ಒಂದು ವರ್ಷದ ಅವಧಿಯ ಮೂವತ್ತು ಕಿರು ಸಂಶೋಧನಾ ಯೋಜನೆಗಳನ್ನು ಆರಂಭಿಸಲಾಗಿದೆ. ಈ ಯೋಜನೆಗೆ ಮೂವತ್ತು ಜನ ಪಿಎಚ್.ಡಿ ಪದವಿ ಹೊಂದಿರುವ ಸಂಶೋಧಕರನ್ನು ಸಂದರ್ಶನ ನಡೆಸಿ ಆಯ್ಕೆಮಾಡಲಾಗಿದೆ. ಪ್ರತಿಯೊಬ್ಬ ಸಂಶೋಧಕರು ಆಯಾ ಜಿಲ್ಲೆಯ ಜನಪದ ಸಾಹಿತ್ಯ, ಜನಪದ ಕಲೆ, ಕಲಾವಿದರು, ಜಾನಪದೀಯ ಸಾಂಸ್ಕೃತಿಕ ಕ್ಷೇತ್ರಗಳು, ವಿವಿಧ ಜ್ಞಾನಪರಂಪರೆಗಳ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಈ ಮುಂದಿನ ಪಟ್ಟಿಯಲ್ಲಿನ ಒಂದು ವಿಷಯದ ಬಗ್ಗೆ ತಲಸ್ಪರ್ಶಿ ಅಧ್ಯಯನ ಕೈಗೊಂಡು ಪ್ರಕಟಣೆಗೆ ಅಣಿ ಮಾಡಿಕೊಡುತ್ತಾರೆ. ಈ ಯೋಜನೆ ಆರಂಭಗೊಂಡ ಒಂದು ವರ್ಷದೊಳಗೆ ಮೂವತ್ತು ಮಹತ್ವದ ಕೃತಿಗಳು ಕನ್ನಡ ನಾಡಿನ ಜನರ ಕೈಸೇರಲಿವೆ.

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India