ದತ್ತಿನಿಧಿ ವಿಶೇಷ ಉಪನ್ಯಾಸಗಳು, ವಿಚಾರ ಸಂಕಿರಣಗಳು, ಸಂವಾದಗಳು
 

ದತ್ತಿನಿಧಿ ವಿಶೇಷ ಉಪನ್ಯಾಸಗಳು


ಜೀ.ಶಂ.ಪ.-ಬದುಕು ಬರಹ ಮತ್ತು ಕು.ಶಿ.ಹರಿದಾಸ ಭಟ್ಟರ-ಜೀವನ ಸಾಧನೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ - 2014ರ ಸೆಪ್ಟೆಂಬರ್ 13


ಜಾನಪದ ಬಹುಶಿಸ್ತೀಯ ಅಧ್ಯಯನ ವಿಷಯವಾಗಲಿ: ಪ್ರೊ.ಅಂಬಳಿಕೆ ಹಿರಿಯಣ್ಣ


ಗೊಟಗೋಡಿ/ ಶಿಗ್ಗಾವಿ : ಬಹುಶಿಸ್ತೀಯ ಮತ್ತು ಅಂತರ ಶಿಸ್ತೀಯ ನೆಲೆಯಲ್ಲಿ ಜಾನಪದವನ್ನು ಅಧ್ಯಯನ ಮಾಡುವ ಕ್ರಮವನ್ನು ಬೆಳೆಸಿಕೊಳ್ಳುವಂತೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಅಂಬಳಿಕೆ ಹಿರಿಯಣ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2014ರ ಸೆಪ್ಟೆಂಬರ್ 13 ರಂದು ಆಯೋಜಿಸಿದ್ದ ಜೀ.ಶಂ.ಪ.-ಬದುಕು ಬರಹ ಮತ್ತು ಕು.ಶಿ.ಹರಿದಾಸ ಭಟ್ಟರ-ಜೀವನ ಸಾಧನೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾನಪದವನ್ನು ಬಹು ಸಂಸ್ಕೃತಿ, ಅರ್ಥಮುಖಿ ಮತ್ತು ವಿಜ್ಞಾನಮುಖಿಯಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳುವುದು ಜಾಗತಿಕ ಯುಗದಲ್ಲಿ ಅನಿವಾರ್ಯ ಎಂದು ಹೇಳಿದರು. ಸಂಶೋಧಕರು ಜಾನಪದ ಅಧ್ಯಯನದಲ್ಲಿ ಬಹು ಮತ್ತು ಭಿನ್ನ ಪಠ್ಯಗಳ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಆ ಮೂಲಕ ವಿಭಿನ್ನ ಆಯಾಮಗಳಲ್ಲಿ ಅಧ್ಯಯನ ಮತ್ತು ಮರು ಶೋಧನೆ ಆಗುವ ಕಡೆ ಗಮನ ಹರಿಸಬೇಕೆಂದರು.


ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ. ನಾವಡ ಅವರು ಜೀ.ಶಂ.ಪ-ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ತೀ.ನಂ. ಶಂಕರನಾರಾಯಣ ಅವರು ಕು.ಶಿ.ಹರಿದಾಸ ಭಟ್ಟರ-ಜೀವನ ಸಾಧನೆ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು ಇದೇ ಸಂದರ್ಭದಲ್ಲಿ ಪ್ರೊ. ಎ.ವಿ. ನಾವಡ ಹಾಗೂ ಪ್ರೊ. ತೀ.ನಂ. ಶಂಕರನಾರಯಣ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಕುಲಸಚಿವರಾದ ಪ್ರೊ.ಡಿ.ಬಿ.ನಾಯ್ಕ, ವಿಸ್ತರಣೆ ಹಾಗೂ ಸಲಹಾ ಕೇಂದ್ರ ನಿರ್ದೇಶಕರೂ, ಮೌಲ್ಯಮಾಪನ ಕುಲಸಚಿವರೂ ಆದ ಪ್ರೊ. ಸ.ಚಿ. ರಮೇಶ, ಭಾಷಾಂತರ ಕೇಂದ್ರದ ನಿರ್ದೇಶಕರಾದ ಪ್ರೊ. ಕೆ. ಪ್ರೇಮಕುಮಾರ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಬಸಪ್ಪ ವೈ ಬಂಗಾರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಭೀಮಣ್ಣ ಕಮ್ಮಾರ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಮರವಂತೆ ಅವರು ಕಾರ್ಯಕ್ರಮ ನಿರೂಪಿಸಿದರು.

ಕೆ.ಆರ್.ಲಿಂಗಪ್ಪ ಅವರ ಹೃದಯ ಜಾನಪದಶ್ರೀಗೆ ಸಿಂಹಾಸನವಾಗಿತ್ತು : ಸನ್ಮಾನ್ಯ ಶ್ರೀ ಗೊ.ರು.ಚ. - 2014ರ ಆಗಸ್ಟ್ 16


ಕೆ.ಆರ್.ಲಿಂಗಪ್ಪ ಅವರ ಹೃದಯ ಜಾನಪದಶ್ರೀಗೆ ಸಿಂಹಾಸನವಾಗಿತ್ತು : ಸನ್ಮಾನ್ಯ ಶ್ರೀ ಗೊ.ರು.ಚ.


ಗೊಟಗೋಡಿ/ ಶಿಗ್ಗಾವಿ : 'ನೀವು ಜಾನಪದದ ಆರಾಧಕರಾದರೂ ಸಾಮಾಜಿಕ ಸೇವೆಯ ಕಾಯಕವನ್ನು ಮಾಡಿದ್ದೀರಿ', 'ಕಲಿತವರ ವೇದಿಕೆಯಲ್ಲಿ ಕಲಿಯದವರ ಸಾಹಿತ್ಯವನ್ನು ವಿಜೃಂಭಿಸಿದವರು ನೀವು.....' ಜಾನಪದ ಗಾನಕೋಗಿಲೆ ಶ್ರೀ ಕೆ.ಆರ್. ಲಿಂಗಪ್ಪನವರ ವ್ಯಕ್ತಿತ್ವವನ್ನು ಕಾವ್ಯಾತ್ಮಕವಾಗಿ ಗುಣಗಾನ ಮಾಡಿದವರು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷರು, ಹಿರಿಯ ಜಾನಪದ ವಿದ್ವಾಂಸರೂ ಆದ ಶ್ರೀ ಗೊ.ರು. ಚನ್ನಬಸಪ್ಪ ಅವರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 2014ರ ಆಗಸ್ಟ್ 16 ರಂದು ಆಯೋಜಿಸಿದ್ದ 'ಕೆ.ಆರ್. ಲಿಂಗಪ್ಪ ದತ್ತಿನಿಧಿ ವಿಶೇಷ ಉಪನ್ಯಾಸ' ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು. 'ನಿಮ್ಮ ಇಂಪಾದ ದನಿಯಲ್ಲಿ ಕುವೆಂಪವನ್ನು ಹಾಡಿದ್ದೀರಿ, ಸಾಂದ್ರವಾದ ಧಾಟಿಯಲ್ಲಿ ಬೇಂದ್ರೆಯನ್ನು ಹಾಡಿದ್ದೀರಿ, ಶರಣರ ವಚನಗಳೂ ಅಷ್ಟೇ ಇಷ್ಟವಾಗಿದ್ದವು ನಿಮಗೆ; ಆದರೆ ಜಾನಪದದ್ದೇ ನಿಮ್ಮ ಜಾಯಮಾನ' ಎಂದು ಕೆ.ಆರ್. ಲಿಂಗಪ್ಪ ಅವರ ಜಾನಪದ ಆಸಕ್ತಿಯನ್ನು ಬಣ್ಣಿಸಿದ ಶ್ರೀ ಗೊ.ರು.ಚ. ಅವರು, 'ಜನಪದರ ಸಂದೇಶ ಸಾರುವುದೇ ನಿಮ್ಮ ಧ್ಯೇಯವಾಗಿತ್ತು, ಅದಕ್ಕಾಗಿ ಕಂಕಣಬದ್ಧ; ಸದಾ ಸಿದ್ಧ, ಜಾನಪದಶ್ರೀಗೆ ನಿಮ್ಮ ಹೃದಯ ಸಿಂಹಾಸನವಾಗಿತ್ತು, ಜನಪದ ಗೀತೆ ನಿಮಗೆ ಭಗವದ್ಗೀತೆ....' ಎಂದು ಭಾವಿಸಿ ಕೆ.ಆರ್. ಲಿಂಗಪ್ಪನವರು ಜಾನಪದಕ್ಕೆ ಅಪೂರ್ವವಾದ ಸೇವೆ ಸಲ್ಲಿಸಿದ ಅಪರೂಪದ ಅನನ್ಯ ಪ್ರತಿಭೆಯಾಗಿದ್ದರು ಎಂದು ಹೇಳಿದರು. ಕೆಆರ್ ಎಲ್ ಬಗೆಗೆ ಬರೆದ ಚರಮಗೀತೆಯನ್ನು ಭಾವಪೂರ್ಣವಾಗಿ ಪ್ರಸ್ತುತಪಡಿಸಿದ ಗೊ.ರು.ಚ. ಅವರು ಕೆ.ಆರ್. ಲಿಂಗಪ್ಪ ಅವರೊಂದಿಗಿನ ಒಡನಾಟ, ಆತ್ಮೀಯತೆಯನ್ನು ಸ್ಮರಿಸಿ, ಗದ್ಗದಿತರಾದರು.


ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲೀಸರ ಅವರು 'ಜನಪದ ಗೀತಗಾಯನ ಮತ್ತು ಕೆ.ಆರ್. ಲಿಂಗಪ್ಪ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೆ.ಆರ್. ಲಿಂಗಪ್ಪನವರು ಜನಪದ ಕಲೆ ಮತ್ತು ಕಲಾವಿದರ ಬಗೆಗೆ ವಿಶೇಷ ಕಾಳಜಿ ಹೊಂದಿದ್ದರು. ಜನಪದ ಸಂಗ್ರಾಹಕರಿಗೆ ಸಿಗುವ ಮನ್ನಣೆ-ಗೌರವಗಳು ಮೂಲ ವಕ್ತೃಗಳಿಗೂ ಸಿಗಬೇಕು ಎಂದು ಪ್ರತಿಪಾದಿಸುತ್ತಿದ್ದ ಅವರು, ನಾಡಿನ ಶ್ರೇಷ್ಠ ಸಂಸ್ಕೃತಿ ಚಿಂತಕರಾಗಿದ್ದರು ಎಂದು ಡಾ. ನೆಲ್ಲೀಸರ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಮಾತನಾಡಿ ನುಡಿಗಾರುಡಿಗ, ಜಾನಪದ ಕೋಗಿಲೆ ಎಂದು ಸುಪ್ರಸಿದ್ಧರಾಗಿದ್ದ ಕೆ.ಆರ್. ಲಿಂಗಪ್ಪ ಅವರು ಜನಪದ ಸಾಹಿತ್ಯವನ್ನು ಜನಪ್ರಿಯಗೊಳಿಸಿ, ಜಾನಪದದ ಪರಿಚಾರಕರಾಗಿ ಕಾರ್ಯನಿರ್ವಹಿಸಿದರು ಎಂದರು. ಜನಪದ ಕಲೆಗಳ ಕಲಿಕೆಗೆ ಒತ್ತಾಸೆಯಾಗಿ ದುಡಿದ ಅವರ ಶ್ರಮ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಪ್ರೊ. ಹಿರಿಯಣ್ಣ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ವಿಕಾಸ ಮಾಸಪತ್ರಿಕೆಯ ನಿವೃತ್ತ ಸಂಪಾದಕರಾದ ಶ್ರೀ ಸಿದ್ದಗಂಗಪ್ಪ ಅವರು ಮಾತನಾಡಿದರು. ಕುಲಸಚಿವರಾದ ಪ್ರೊ. ಡಿ.ಬಿ. ನಾಯಕ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಗೊ.ರು. ಚನ್ನಬಸಪ್ಪ ಹಾಗೂ ಡಾ. ಬಸವರಾಜ ನೆಲ್ಲೀಸರ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಡಾ. ರಾಮು ಮೂಲಗಿಯವರು ಜನಪದ ಗೀತಗಾಯನ ಕಾರ್ಯಕ್ರಮವನ್ನು ಅಮೋಘವಾಗಿ ನಡೆಸಿಕೊಟ್ಟರು. ವಿಸ್ತರಣೆ ಹಾಗೂ ಸಲಹಾ ಕೇಂದ್ರ ನಿರ್ದೇಶಕರೂ, ಮೌಲ್ಯಮಾಪನ ಕುಲಸಚಿವರೂ ಆದ ಪ್ರೊ. ಸ.ಚಿ. ರಮೇಶ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್. ಮೋಹನಕುಮಾರ್ ಪ್ರಾಸಿದರು. ಸಹಾಯಕ ಪ್ರಾಧ್ಯಾಪಕ ಶ್ರೀ ಪ್ರಕಾಶ ಹೊಸಮನಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಕುಮಾರಿ ಶ್ವೇತಾ ಎಂ.ಬಿ. ಅವರು ಕಾರ್ಯಕ್ರಮ ನಿರೂಪಿಸಿದರು.


ಜಾನಪದ ಭಾಷಾಂತರ ಕೇಂದ್ರದ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಡಾ. ಕೆ. ಪ್ರೇಮಕುಮಾರ, ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಶ್ರೀ ಭೀಮರಾವ ಪೀರಾಜಿರಾವ ರಣಮೋಡೆ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ 'ಶ್ರೀಕೃಷ್ಣಪಾರಿಜಾತ ಪರಂಪರೆ ಮತ್ತು ಹೊಸ ಸಾಧ್ಯತೆಗಳು' ವಿಷಯದ ಕುರಿತು ದತ್ತಿನಿಧಿ ವಿಶೇಷ ಉಪನ್ಯಾಸ - ಅಕ್ಟೋಬರ್ 28,2013


ಶ್ರೀಕೃಷ್ಣಪಾರಿಜಾತ ಕಲೆಯನ್ನು ಪುನರ್ ಪರಿಷ್ಕರಿಸಿ ನೂತನ ಪಠ್ಯಕ್ರಮ ರೂಪಿಸುವುದು ಅಗತ್ಯ : ಡಾ. ಸಿ.ಕೆ. ನಾವಲಗಿ ಪ್ರತಿಪಾದನೆ


ಗೊಟಗೋಡಿ / ಶಿಗ್ಗಾವಿ : ಉತ್ತರ ಕರ್ನಾಟಕದ ಶ್ರೇಷ್ಠ ಜನಪದ ರಂಗಪ್ರಕಾರವಾಗಿರುವ ಶ್ರೀಕೃಷ್ಣಪಾರಿಜಾತ ಕಲೆಯನ್ನು ಪುನರ್ ಪರಿಷ್ಕರಿಸಿ ನೂತನ ಪಠ್ಯಕ್ರಮ ರೂಪಿಸುವುದು ಅಗತ್ಯ ಎಂದು ಗೋಕಾಕ ಜಿಎಸ್ಎಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ವಿದ್ವಾಂಸ ಡಾ. ಸಿ.ಕೆ. ನಾವಲಗಿ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಅಕ್ಟೋಬರ್ 28, 2013ರಂದು ಶ್ರೀ ಭೀಮರಾವ ಪೀರಾಜಿರಾವ ರಣಮೋಡೆ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ 'ಶ್ರೀಕೃಷ್ಣಪಾರಿಜಾತ ಪರಂಪರೆ ಮತ್ತು ಹೊಸ ಸಾಧ್ಯತೆಗಳು' ವಿಷಯದ ಕುರಿತು ದತ್ತಿನಿಧಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಜಾಗತೀಕರಣದ ಪ್ರಭಾವದಿಂದಾಗಿ ಪಾರಂಪರಿಕ ಕಲೆಗಳು ವಿನಾಶದ ಅಂಚಿನಲ್ಲಿವೆ. ಯಕ್ಷಗಾನ, ಸಂಗ್ಯಾ-ಬಾಳ್ಯಾ ಕಲೆಗಳಿಗೆ ಇರುವಂತೆ ಗಾಡ್ ಫಾದರ್ ಎಂಬುವರು ಕೃಷ್ಣಪಾರಿಜಾತ ಕಲೆಗೆ ಯಾರೂ ಇಲ್ಲ ಎಂದ ಅವರು, ಉತ್ತರ ಕರ್ನಾಟಕದ ಹೆಮ್ಮೆಯ ಕಲೆಯಾಗಿರುವ ಕೃಷ್ಣಪಾರಿಜಾತ ರಂಗಪ್ರಕಾರವನ್ನು ಆಧುನಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಪುನರ್ ಸುಧಾರಿಸಬೇಕು. ಈ ಸಂಬಂಧ ವಿದ್ವಾಂಸರು, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತೀಕರಣದ ಪ್ರಭಾವದಿಂದಾಗಿ ಪಾರಂಪರಿಕ ಕಲೆಗಳು ಮೂಲೆಗುಂಪಾಗುತ್ತಿವೆ. ಟಿ.ವಿ. ಸಿನೇಮಾ, ಕಂಪ್ಯೂಟರ್ ಗಳಂತಹ ಸಮೂಹ ಮಾಧ್ಯಮಗಳ ಪ್ರಭಾವದಿಂದಾಗಿ ದಾರಿತಪ್ಪುತ್ತಿರುವ ಯುವಪೀಳಿಗೆ ಯನ್ನು ಜನಪದ ಕಲೆಗಳ ಕಡೆಗೆ ಆಕರ್ಷಿತಗೊಳಿಸುವ ಈ ಮೂಲಕ ಕಳೆದು ಹೋಗುತ್ತಿರುವ ಕಲೆಗಳನ್ನು ಉಳಿಸಿ ಬೆಳಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ವೇದಿಕೆ ಮೇಲೆ ಕುಲಸಚಿವ ಪ್ರೊ. ಡಿ.ಬಿ. ನಾಯಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ. ಸಿ.ಕೆ. ನಾವಲಗಿ ಅವರನ್ನು ಹಾಗೂ ಪಾರಿಜಾತ ಕಲಾವಿದರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಸ್ವಾಗತಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಕುಮಾರಿ ಎಂ.ಬಿ. ಶ್ವೇತಾ ನಿರೂಪಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ವಂದಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕದ ಶ್ರೀ ಈಶ್ವರಚಂದ್ರ ಬೆಟಗೇರಿಯವರ ನೇತೃತ್ವದಲ್ಲಿ ಹನುಮಂತ ದಾಸರ, ಮಹಾಂತೇಶ ಹೂಗಾರ, ಬಸವರಾಜ ಕಲ್ಲಪ್ಪ ಕುಂಬಾರ, ಮಹಾರುದ್ರಪ್ಪ ಪತ್ತಾರ, ಚಂದ್ರಶೇಖರ ನಿಂಗಯ್ಯ ಹಿರೇಮಠ ಅವರ ಶ್ರೀಕೃಷ್ಣ ಪಾರಿಜಾತ ಸಣ್ಣಾಟ ಪ್ರಸಂಗವನ್ನು ಅಮೋಘವಾಗಿ ಪ್ರದರ್ಶಿಸಿದರು.
ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಎಂ.ಬಿ.ಎ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ ಎನ್.ಕೆ. ಚಂದು, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ, ಡಾ. ಶ್ರೀಶೈಲ ಹುದ್ದಾರ, ಕಲಾವಿದರಾದ ಬಸವರಾಜ ಶಿಗ್ಗಾವಿ, ವಿರೇಶ ಬಡಿಗೇರ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಶ್ರೀ ಕೆ.ಆರ್.ಲಿಂಗಪ್ಪ ಹಾಗೂ ಜಾನಪದ ಚಿಂತನೆಗಳು ಕುರಿತು ದತ್ತಿನಿಧಿ ವಿಶೇಷ ಉಪನ್ಯಾಸ - ಅಕ್ಟೋಬರ್ 25,2013


ಜನಪದ ಸಾಹಿತ್ಯದ ಸಾರ, ಸತ್ವವನ್ನು ಪ್ರಚುರಪಡಿಸಿದ ಜಾನಪದ ಜಂಗಮ ಕೆ.ಆರ್. ಲಿಂಗಪ್ಪ : ಪ್ರೊ. ಡಿ.ಕೆ. ರಾಜೇಂದ್ರ


ಗೊಟಗೋಡಿ/ ಶಿಗ್ಗಾವಿ : ತಮ್ಮ ವಿಶಿಷ್ಟ ಶೈಲಿಯ ಹಾಡುಗಾರಿಕೆಯಿಂದ ಕೆ.ಆರ್. ಲಿಂಗಪ್ಪ ಅವರು ಜನಪದ ಸಾಹಿತ್ಯದ ಸಾರ, ಸತ್ವವನ್ನು ನಾಡಿನುದ್ದಕ್ಕೂ ಬಿತ್ತರಿಸಿದ ಜಾನಪದಜಂಗಮ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಕೆ. ರಾಜೇಂದ್ರ ಅವರು ಬಣ್ಣಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರವು ನಡುಮನೆ ಸಭಾಂಗಣದಲ್ಲಿ ಅಕ್ಟೋಬರ್ 25, 2013ರಂದು ಆಯೋಜಿಸಿದ್ದ ಶ್ರೀ ಕೆ.ಆರ್.ಲಿಂಗಪ್ಪ ಹಾಗೂ ಜಾನಪದ ಚಿಂತನೆಗಳು ಕುರಿತು ದತ್ತ್ತಿನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಮೂಲತಃ ವಕೀಲರಾಗಿದ್ದ ಕೆ.ಆರ್. ಲಿಂಗಪ್ಪ ಅವರು ಜನಪದ ಹಾಡುಗಾರ ಹಾಗೂ ಜಾನಪದ ಚಿಂತಕರೂ ಆಗಿದ್ದರು. ತಮ್ಮ ಬದುಕಿನುದ್ದಕ್ಕೂ ಜಾನಪದವನ್ನು ಉಂಡುಟ್ಟು ಉಸಿರಾಡಿದ ಅವರು, ನಾಡಿನ ತುಂಬ ಸಂಚರಿಸಿ ಜನಪದ ಸಾಹಿತ್ಯ, ಸಂಸ್ಕೃತಿಯನ್ನು ತಮ್ಮದೆಯಾದ ರೀತಿಯಲ್ಲಿ ವ್ಯಾಖ್ಯಾನಿಸಿ ಪ್ರಚುರಪಡಿಸಿದರು. ಅಷ್ಟೇ ಅಲ್ಲದೆ ಜಾನಪದದ ಸಮಗ್ರ ಸತ್ವವನ್ನು ಅನಾವರಣಗೊಳಿಸಿದ ಆದ್ಯರಲ್ಲಿ ಲಿಂಗಪ್ಪನವರು ಒಬ್ಬರು ಎಂದು ಪ್ರೊ. ರಾಜೇಂದ್ರ ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಿ.ಬಿ. ನಾಯಕ ಅವರು ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಮಹತ್ವದ ಕಾರ್ಯಮಾಡಿದ ಮಹನೀಯರನ್ನು ನೆನೆಯುವುದು ಔಚಿತ್ಯಪೂರ್ಣವಾದುದು. ಜಾನಪದ ಕ್ಷೇತ್ರದ ಪ್ರಾತಃಸ್ಮರಣೀಯರಲ್ಲಿ ಒಬ್ಬರಾದ ಕೆ.ಆರ್. ಲಿಂಗಪ್ಪ ಅವರ ಜಾನಪದ ಸಂಬಂಧಿ ಕೆಲಸ-ಕಾರ್ಯಗಳು ಮನನೀಯ ಎಂದ ಅವರು, ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರ ಕುರಿತು ದತ್ತಿನಿಧಿಯಂತಹ ಕಾರ್ಯಕ್ರಮಗಳನ್ನು ಕರ್ನಾಟಕದ ತುಂಬ ವಿಸ್ತರಿಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜಾನಪದ ಕ್ಷೇತ್ರದ ಆದ್ಯರಾದ ಕೆ.ಆರ್. ಲಿಂಗಪ್ಪ ಅವರು, ಜನಪದ ಸಾಹಿತ್ಯವನ್ನು ಜನಸಾಮಾನ್ಯರಿಗೂ ತಲುಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಜನಪದ ಸಾಹಿತ್ಯ, ಸಂಸ್ಕೃತಿ ಬಗೆಗೆ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದ್ದ ಅವರು, ಜಾನಪದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿರಿಸಿದ್ದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಡಿ.ಕೆ. ರಾಜೇಂದ್ರ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಆತ್ಮೀಯವಾಗಿ ಗೌರವಿಸಿ, ಸನ್ಮಾನಿಸಲಾಯಿತು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಯೋಗೀಶ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಸ್ವಾಗತಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಕುಮಾರಿ ಎಂ.ಬಿ. ಶ್ವೇತಾ ನಿರೂಪಿಸಿದರು. ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ ವಂದಿಸಿದರು.
ಎಂ.ಬಿ.ಎ ವಿಭಾಗದ ಮುಖ್ಯಸ್ಥ ಪ್ರೊ. ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರ
ಶ್ರೀ ಎನ್.ಕೆ. ಚಂದು, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ, ಡಾ. ರಾಮು ಮೂಲಗಿ, ಡಾ. ಶ್ರೀಶೈಲ ಹುದ್ದಾರ, ಗುತ್ತಿಗೆದಾರ ಶ್ರೀ ನಾಗರಾಜ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.


ಸಂವಾದಗಳು


ಜಾನಪದ ಸಂಸ್ಕೃತಿ ಸಂವರ್ಧನೆಗೆ ಸರ್ಕಾರದ ನೆರವು ಅಗತ್ಯ: ಪ್ರೊ. ದೇಜಗೌ ಪ್ರತಿಪಾದನೆ

ಗೊಟಗೋಡಿ/ ಶಿಗ್ಗಾವಿ : ಜಗತ್ತಿನಲ್ಲಿ ಎಲ್ಲಕ್ಕೂ ಮೂಲವಾಗಿರುವ ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸರ್ಕಾರ ಪೂರ್ಣ ಪ್ರಮಾಣದ ನೆರವು ಮತ್ತು ಸಹಕಾರ ನೀಡಬೇಕು ಎಂದು ನಾಡೋಜ ಡಾ. ದೇ. ಜವರೇಗೌಡ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಡುಮನೆ' ಸಭಾಂಗಣದಲ್ಲಿ 23 ಸೆಪ್ಟಂಬರ್ 2013ರಂದು ನಡೆದ 'ವಿದ್ಯಾರ್ಥಿಗಳೊಂದಿಗೆ ಸಂವಾದ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆಚಾರ-ವಿಚಾರ, ನಂಬಿಕೆ, ರೂಢಿ, ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಜಾನಪದ ವಿಶ್ವವಿದ್ಯಾಲಯವು ಬೃಹತ್ ವಸ್ತುಸಂಗ್ರಹಾಲಯ ನಿರ್ಮಾಣ, ಗ್ರಾಮ ಚರಿತ್ರೆ ಕೋಶ, ಭಾರತೀಯ ದೇಸೀ ಕೃಷಿ ವಿಜ್ಞಾನ ಕೋಶ, ಬುಡಕಟ್ಟು ಭಾಷಾಂತರ ಯೋಜನೆ ಇತ್ಯಾದಿ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಾನಪದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತಿರುವ ವಿಶ್ವವಿದ್ಯಾಲಯಕ್ಕೆ ಸರ್ಕಾರ, ಜನಪ್ರತಿನಿಧಿಗಳು ಅಗತ್ಯ ನೆರವು ಮತ್ತು ಸಹಕಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಗತ್ತಿನಲ್ಲಿಯೇ ಅತ್ಯಂತ ಸಮೃದ್ಧವಾದ ಭಾಷೆ ಕನ್ನಡ ಎಂದು ತಿಳಿಸಿದ ಅವರು, ಜಗತ್ತಿನ ಎಲ್ಲ ಮಹಾಕಾವ್ಯಗಳು ಜಾನಪದ ಮೂಲದಿಂದಲೇ ಹುಟ್ಟಿಕೊಂಡಿವೆ. ಅಗಾಧವಾದ ಪಾರಂಪರಿಕ ಜ್ಞಾನ, ಸಾಹಿತ್ಯವನ್ನು ಹೊಂದಿರುವ ಜಾನಪದವು ಪಿಯುಸಿ ಸೇರಿದಂತೆ ಕೆಎಎಸ್ ಮತ್ತು ಐಎಎಸ್ ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ವಿಷಯವಾಗಿ ಪರಿಗಣಿಸಲ್ಪಡುವುದು ಅಗತ್ಯವಾಗಿದೆ ಎಂದು ದೇಜಗೌ ಪ್ರತಿಪಾದಿಸಿದರು. ಜಾನಪದಕ್ಕೆ ಸಂಪೂರ್ಣ ಭವಿಷ್ಯವಿದ್ದು ಯಾರೂ ಧೃತಿಗೆಡಬೇಕಿಲ್ಲ. ಈ ಹಿನ್ನೆಲೆಯಲ್ಲಿ ಜಾನಪದ ವಿಶ್ವವಿದ್ಯಾಲಯ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತ ಸೇರಿದಂತೆ, ಪಿಯುಸಿ ಹಾಗೂ ಪ್ರಥಮದರ್ಜೆ ಕಾಲೇಜುಗಳಲ್ಲಿ ಜಾನಪದ ವಿಷಯವನ್ನು ಕಲಿಸುವಂತೆ ಕೋರಿ ಸರ್ಕಾರಕ್ಕೆ ಮತ್ತು ಸಂಬಂಧಿಸಿದ ಮಂತ್ರಿಗಳಿಗೆ ಪ್ರಸ್ತಾವವನ್ನು ಸಲ್ಲಿಸಲಾಗಿದೆ. ಹಿರಿಯ ವಿದ್ವಾಂಸರಾದ ಪ್ರೊ. ದೇ. ಜವರೇಗೌಡ ಅವರು ಸೂಚಿಸಿದ ಎಲ್ಲ ಸಲಹೆ ಮಾರ್ಗದರ್ಶನಗಳನ್ನು ಗೌರವದಿಂದ ಸ್ವೀಕರಿಸಿ, ವಿಶ್ವವಿದ್ಯಾಲಯವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹತ್ವಾಕಾಂಕ್ಷೆಯ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೊ. ದೇ. ಜವರೇಗೌಡ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕುಲಸಚಿವ ಪ್ರೊ. ಡಿ.ಬಿ. ನಾಯಕ ವೇದಿಕೆ ಮೇಲೆ ಉಪಸ್ಥಿತರಿದ್ದು ಸ್ವಾಗತಿಸಿದರು.
ಅತಿಥಿ ಅಧ್ಯಾಪಕಿ ಶ್ರೀಮತಿ ಸಾವಕ್ಕ ಪ್ರಾರ್ಥಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ವಂದಿಸಿದರು. ಕುಲಪತಿಯವರ ಆಪ್ತಕಾರ್ಯದರ್ಶಿ ಡಾ. ಬಸಪ್ಪ ಬಂಗಾರಿ ನಿರೂಪಿಸಿದರು.
ನಾಡಿನ ಖ್ಯಾತ ಭಾಷಾಂತರಕಾರ ಡಾ. ಪ್ರಧಾನ ಗುರುದತ್, ವಿದ್ವಾಂಸರಾದ ಡಾ. ಸಿ. ನಾಗಣ್ಣ, ಡಾ. ಎನ್. ಎಂ. ತಳವಾರ, ಡಾ. ಕೆ. ಕೆಂಪೇಗೌಡ, ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಎಂ.ಬಿ.ಎ ವಿಭಾಗದ ಮುಖ್ಯಸ್ಥ ಪ್ರೊ. ಎಂ. ಚಂದ್ರ ಪೂಜಾರಿ, ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.


ವಿಚಾರ ಸಂಕಿರಣಗಳು


ಪ್ರೊ. ಸುಧಾಕರ ಅವರು ಜಾನಪದದ ಪ್ರತಿರೂಪದಂತೆ ಬದುಕಿ-ಬಾಳಿದರು : ಪ್ರೊ. ಕಾಳೇಗೌಡ ನಾಗವಾರ

ಗೊಟಗೋಡಿ/ ಶಿಗ್ಗಾವಿ : ಜಾತ್ಯಾತೀತ, ಸಮಾಜವಾದಿಯಾಗಿದ್ದ ಪ್ರೊ. ಸುಧಾಕರ ಅವರು ಜಾನಪದದ ಪ್ರತಿರೂಪದಂತೆ ಬದುಕಿ-ಬಾಳಿದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕಾಳೇಗೌಡ ನಾಗವಾರ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಾಗಂದಿಗೆ' ಸಭಾಂಗಣದಲ್ಲಿ 2014ರ ಆಗಸ್ಟ್ 9 ರಂದು 'ಪ್ರೊ. ಸುಧಾಕರ ಮತ್ತು ಜಾನಪದ ವಿಚಾರಗೋಷ್ಠಿ-ಸಂವಾದ' ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶದಂತೆ ತಮ್ಮ ಜೀವನದುದ್ದಕ್ಕೂ ಬಾಳಿದ ಪ್ರೊ. ಸುಧಾಕರ ಅವರು ಸೃಜನಶೀಲ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಗೈದಿದ್ದಾರೆ. ಲೋಹಿಯಾ ಸಿದ್ಧಾಂತದಿಂದ ನೇರವಾಗಿ ಪ್ರೇರೇಪಿತರಾಗದಿದ್ದರೂ ಸಮಾಜವಾದಿ ಅಂಶಗಳನ್ನು ಅವರ ಕೃತಿಗಳು ಒಳಗೊಂಡಿರುತ್ತವೆ. ಅವರು ನಿಜವಾದ ಅರ್ಥದಲ್ಲಿ ಅನಿಕೇತನವಾಗಿ ಜೀವಿಸಿದವರು. ಪ್ರೊ. ಸುಧಾಕರರ ಬಗೆಗೆ ಈ ಕಾರ್ಯಕ್ರಮ ಆಯೋಜಿಸಿದ ವಿಶ್ವವಿದ್ಯಾಲಯದ ಕ್ರಮ ಸ್ವಾಗತಾರ್ಹ. ಜಾನಪದ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ಜೀಶಂಪ ಅವರ ಬಗೆಗೂ ವಿಶೇಷ ವಿಚಾರಗೋಷ್ಠಿಯನ್ನು ಆಯೋಜಿಸಬೇಕಾದ ಅಗತ್ಯತೆ ಇದೆ ಎಂದು ಸಲಹೆ ನೀಡಿದ ಪ್ರೊ. ನಾಗವಾರರು, ಸುಧಾಕರರ ಜಾನಪದದ ಸಮಗ್ರ ಸಾಹಿತ್ಯವನ್ನು ವಿಶ್ವವಿದ್ಯಾಲಯವು ಪ್ರಕಟಿಸಬೇಕೆಂದು ಸಲಹೆ ನೀಡಿದರು. ಮೈಸೂರಿನ ಶ್ರೀಮತಿ ರಾಜಮ್ಮ ಸುಧಾಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 'ನಮಗಿಂತ ಕೆಳಗಿದ್ದವರನ್ನು ನೋಡಿ ಬದುಕುವುದನ್ನು ಕಲಿಯಬೇಕು' ಎಂದು ಹೇಳುತ್ತಿದ್ದ ಸುಧಾಕರರು, ನಾಡಿನಾದ್ಯಂತ ಶಿಷ್ಯಬಳಗವನ್ನು ಹೊಂದಿರುವುದು ನಮ್ಮ ಕುಟುಂಬಕ್ಕೆ ಅತ್ಯಂತ ಹೆಮ್ಮೆ ಎಂದರಲ್ಲದೆ, ಸುಧಾಕರರ ಕುರಿತು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಕೃತಜ್ಞತೆಗಳನ್ನು ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಮೈಲಹಳ್ಳಿ ರೇವಣ್ಣ ಅವರು ಮಾತನಾಡಿ, ಪ್ರೊ. ಸುಧಾಕರರು ಶ್ರದ್ಧೆ, ಸಂಯಮ, ಪ್ರಾಮಾಣಿಕತೆಯಿಂದ ಮಾಡಿರುವ ಜಾನಪದ ಕೆಲಸ ಅವಿಸ್ಮರಣೀಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ 'ಜಾನಪದ ವಿಶ್ವಕೋಶ'ದ ಮುಖ್ಯ ಸಂಪಾದಕರಾದ ಡಾ.ಹಾ.ತೀ. ಕೃಷ್ಣೇಗೌಡ ಅವರು, ಜಾನಪದ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಪ್ರೊ. ಸುಧಾಕರರ ಕುರಿತು ಆಯೋಜನೆ ಮಾಡಿದ ಈ ಕಾರ್ಯಕ್ರಮವು ಸಾಂಸ್ಕೃತಿಕ ಜವಾಬ್ದಾರಿಯನ್ನು ನಿರ್ವಹಿಸಬೇಕೆಂಬುದಕ್ಕೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಮಾತನಾಡಿ, ಜಾನಪದ ಕ್ಷೇತ್ರದ ಆದ್ಯ ಪಿತಾಮಹರಲ್ಲಿ ಪ್ರೊ. ಸುಧಾಕರರು ಒಬ್ಬರು. ಅತ್ಯಂತ ಸಂವೇದನಾಶೀಲ, ಸೃಜನಶೀಲ ಬರಹಗಾರರಾಗಿದ್ದ ಪ್ರೊ. ಸುಧಾಕರ ಅವರ ಜಾನಪದ ಸಂಬಂಧೀ ಕೃತಿಗಳ ಸಮಗ್ರ ಸಂಪುಟವನ್ನು ವಿಶ್ವವಿದ್ಯಾಲಯವು ಪ್ರಕಟಿಸಲಿದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರೂ, ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರೂ ಆದ ಪ್ರೊ ಸ.ಚಿ. ರಮೇಶ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕುಲಸಚಿವರಾದ ಪ್ರೊ. ಡಿ.ಬಿ. ನಾಯಕ ಅವರು ಸ್ವಾಗತಿಸಿದರು. ಶ್ರೀ ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಕುಮಾರಿ ಶ್ವೇತಾ ಎಂ.ಬಿ. ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀ ಜಯದತ್ತ ಎಸ್. ವಂದಿಸಿದರು. ನಿರ್ದೇಶಕ ಹಾಗೂ ಪ್ರಾಧ್ಯಾಪಕರಾದ ಡಾ. ಕೆ. ಪ್ರೇಮಕುಮಾರ, ಜಾನಪದ ವಿದ್ವಾಂಸರಾದ ಡಾ. ಡಿ.ಕೆ. ರಾಜೇಂದ್ರ, ಡಾ. ಸಣ್ಣರಾಮ, ಡಾ. ರಾಜಪ್ಪ ದಳವಾಯಿ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಡಾ. ಜಿ.ವಿ. ಆನಂದಮೂರ್ತಿ, ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ, ವಿಶ್ವವಿದ್ಯಾಲಯದ ಬೋಧಕ ಮತ್ತು ಬೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ವಿಚಾರಗೋಷ್ಠಿ 1 ಮತ್ತು 2 ರ ಸುದ್ದಿ

ಗೊಟಗೋಡಿ/ ಶಿಗ್ಗಾವಿ : ಜಾನಪದ ಮತ್ತು ಶಿಷ್ಟ ಸಾಹಿತ್ಯ ಪ್ರಕಾರಗಳಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿದ ಪ್ರೊ. ಸುಧಾಕರ ಅವರ ಪ್ರತಿಭೆ ಅನನ್ಯವಾದುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕರಾದ ಪ್ರೊ. ಡಿ.ಕೆ. ರಾಜೇಂದ್ರ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ನಾಗಂದಿಗೆ' ಸಭಾಂಗಣದಲ್ಲಿ 2014ರ ಆಗಸ್ಟ್ 9 ರಂದು 'ಪ್ರೊ. ಸುಧಾಕರ ಮತ್ತು ಜಾನಪದ ವಿಚಾರಗೋಷ್ಠಿ-ಸಂವಾದ' ಕಾರ್ಯಕ್ರಮದಲ್ಲಿ ಜರುಗಿದ ಮೊದಲ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಯಾವುದೇ ಪಿಎಚ್.ಡಿ. ಪದವಿಗೆ ಹಂಬಲಿಸದೆ, ಪ್ರಾಧ್ಯಾಪಕ ಹುದ್ದೆಗೆ ಆಸೆಪಡದೇ ಅಪಾರ ವಿದ್ವತ್ತನ್ನು ಗಳಿಸಿಕೊಂಡ ಮಾನವೀಯ ವ್ಯಕ್ತಿತ್ವದ ಪ್ರೊ. ಸುಧಾಕರರು ಉತ್ತಮ ಶಿಷ್ಯಪರಂಪರೆಯನ್ನು ಬೆಳೆಸಿದವರು. ಜಾನಪದ, ಶಿಷ್ಟ ಸಾಹಿತ್ಯ, ವಿಮರ್ಶೆ, ಸಂಶೋಧನೆ ಪ್ರಕಾರಗಳಲ್ಲಿ ಸಮಾನ ಪ್ರಭುತ್ವ ಪಡೆದುಕೊಂಡಿದ್ದ ಅವರು, ವಿಫುಲ ಸಾಹಿತ್ಯ ಕೃಷಿಯನ್ನು ಗೈದಿದ್ದಾರೆ ಎಂದು ಹೇಳಿದರು. ತುಮಕೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಜಿ.ವಿ. ಆನಂದಮೂರ್ತಿ ಅವರು 'ಪ್ರೊ. ಸುಧಾಕರ ಅವರ ಸೃಜನಶೀಲ ಸಾಹಿತ್ಯದಲ್ಲಿ ಜಾನಪದೀಯ ಅಂಶಗಳು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಕನ್ನಡ ಸೃಜನಶೀಲ ಬರಹಿದಿಂದ ಜಾನಪದಕ್ಕೆ ಜಾರಿದ ಸಾಹಿತಿಗಳಲ್ಲಿ ಪ್ರೊ. ಸುಧಾಕರ ಒಬ್ಬರು. ತಮ್ಮ ಕಥೆಗಳ ಮೂಲಕ ಗ್ರಾಮೀಣ ಬದುಕನ್ನು ಜೀವಂತವಾಗಿ ಕಟ್ಟಿಕೊಟ್ಟಿರುವ ಪ್ರೊ. ಸುಧಾಕರರ ಕಥಾಪಾತ್ರಗಳು ಮನಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಯೋಗ್ಯವಾಗಿವೆ ಎಂದು ತಿಳಿಸಿದರು. ಬೆಂಗಳೂರಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು 'ಪ್ರೊ. ಸುಧಾಕರ ಅವರ ಗಾದೆ-ಒಗಟು-ನುಡಿಗಟ್ಟು ಸಂಕಲನಗಳು' ವಿಷಯದ ಕುರಿತು ಮಾತನಾಡಿ, ಪ್ರೊ. ಸುಧಾಕರರು ಅಪಾರ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ಗಾದೆ-ಒಗಟು-ನುಡಿಗಟ್ಟುಗಳು ಕನ್ನಡ ಜಾನಪದ ಕ್ಷೇತ್ರಕ್ಕೆ ಅಮೂಲ್ಯವಾದವು. ಅಳಿದುಳಿದಿರುವ ಜಾನಪದ ಸಂಪತ್ತನ್ನು ಸಂಗ್ರಹಿಸಲು, ವಿಶ್ಲೇಷಿಸಲು ಪ್ರೊ. ಸುಧಾಕರರು ಮಾಡಿರುವ ವಿಶಿಷ್ಟ ಕಾರ್ಯವು ಮಾದರಿಯಾಗಿದೆ ಎಂದು ಹೇಳಿದರು. ಎರಡನೇ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಸಣ್ಣರಾಮ ಅವರು ಮಾತನಾಡಿ, ಪ್ರೊ. ಸುಧಾಕರ ಅವರ ಸಾಹಿತ್ಯ ಸಾಗರವಿದ್ದಂತೆ. ಜಾನಪದವನ್ನು ಸೃಜನಶೀಲವಾಗಿ ರೂಪಿಸಿದ ವಿರಳ ವಿದ್ವಾಂಸರಲ್ಲಿ ಪ್ರೊ. ಸುಧಾಕರರು ಅಗ್ರಗಣ್ಯರು ಎಂದು ಅಭಿಪ್ರಾಯಪಟ್ಟರು. ಬೆಳಗಾವಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರಾಜಪ್ಪ ದಳವಾಯಿ ಅವರು 'ಪ್ರೊ. ಸುಧಾಕರ ಅವರ ಜಾನಪದ ನಿಷ್ಠೆ ಮತ್ತು ಜಾನಪದ ಚಿಂತನೆಗಳು' ವಿಷಯದ ಕುರಿತು ಮಾತನಾಡಿ, ಗುರು-ಶಿಷ್ಯ ಸಂಬಂಧ ಹೇಗಿರಬೇಕು ಎಂಬುದಕ್ಕೆ ಪ್ರೊ. ಸುಧಾಕರ ಅವರ ಬದುಕು ಅನುಕರಣೀಯ. ತಮ್ಮ ವಿದ್ವತ್ತಿಗೆ ಅಹಂಕಾರ ಪಡದೇ ವಿನಯದಿಂದಲೇ ವ್ಯಕ್ತಿತ್ವ ಕಟ್ಟಿಕೊಂಡಿರುವ ಸುಧಾಕರರು, ಪದ ನಿಷ್ಪತ್ತಿಶಾಸ್ತ್ರದ ಕುರಿತು ವಿಶೇಷ ಕುತೂಹಲ ಹೊಂದಿದ್ದರಲ್ಲದೆ ಜಾನಪದಕ್ಕೆ ಮೌಲ್ಯಯುತ ಕೊಡುಗೆ ನೀಡಿದರು ಎಂದು ಹೇಳಿದರು. ಹರಪನಹಳ್ಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಲಮರಹಳ್ಳಿ ಮಲ್ಲಿಕಾರ್ಜುನ ಅವರು 'ಪ್ರೊ. ಸುಧಾಕರ ಅವರು ಸಂಗ್ರಹಿಸಿದ ಜನಪದ ಕತೆಗಳು' ವಿಷಯದ ಕುರಿತು ಮಾತನಾಡಿ, ವಕ್ತೃಗಳು ಹೇಳುವ ಜನಪದ ಕತೆಗಳನ್ನು ಯಥಾವತ್ತಾಗಿ ಸಂಗ್ರಹಿಸುವುದು ಸವಾಲಿನ ಕೆಲಸ. ಸುಧಾಕರರು ಸಂಗ್ರಹದ ಈ ಸವಾಲನ್ನು ಸಮರ್ಥವಾಗಿ ಎದುರಿಸಿ ಯಶಸ್ವಿಯಾದರು. ಪ್ರಾದೇಶಿಕ ಜನಪದ ಕತೆಗಳಲ್ಲಿ ವ್ಯಕ್ತವಾದ ಭಾಷೆಯನ್ನು ಬಳಸಿಕೊಂಡು ಜಾನಪದದ ಸಾಂಸ್ಕೃತಿಕ ನಿಘಂಟನ್ನು ರಚಿಸಲು ಸಾಧ್ಯ ಎಂದು ಹೇಳಿದರು. ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ಎನ್.ಕೆ ಹಾಲೇಶಪ್ಪ, ಡಾ. ಬಸಪ್ಪ ಬಂಗಾರಿ, ಡಾ. ವೃಷಭಕುಮಾರ್, ಡಾ. ಚಂದ್ರಪ್ಪ ಸೊಬಟಿ, ಡಾ. ಪಿ.ಗೌರೀಶ, ಕುಮಾರಿ ಶ್ವೇತಾ ಎಂ.ಬಿ., ಡಾ. ಭಾರತಿ ಮರವಂತೆ ಮುಂತಾದವರು ಭಾಗವಹಿಸಿ, ವಿಚಾರ ಮಂಡಿಸಿದರು. ಡಾ. ಭಾರತಿ ಮರವಂತೆ ಕಾರ್ಯಕ್ರಮ ನಿರ್ವಹಿಸಿದರು.

ಜೀವನದಲ್ಲಿ ವಿದ್ಯೆಯನ್ನು ಹೇಳಿಕೊಡುವ ಭಾಗ್ಯ ಅತ್ಯಂತ ದೊಡ್ಡದು: ಶ್ರೀ ನಾಗರಾಜ ಶಂಕರ ಸಿದ್ದಿ

ಗೊಟಗೋಡಿ/ ಶಿಗ್ಗಾವಿ : ಜೀವನದಲ್ಲಿ ವಿದ್ಯೆಯನ್ನು ಹೇಳಿಕೊಡುವ ಭಾಗ್ಯ ಅತ್ಯಂತ ದೊಡ್ಡದು. ನೃತ್ಯ ಹೇಳಿಕೊಡುವ ಪುಣ್ಯದ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬುಡಕಟ್ಟು ಕಲಾವಿದರಾದ ಶ್ರೀ ನಾಗರಾಜ ಶಂಕರ ಸಿದ್ದಿ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಾಗಂದಿಗೆ ವೇದಿಕೆಯಲ್ಲಿ ಆಯೋಜಿಸಲಾಗಿರುವ ದಿನಾಂಕ ಫೆಬ್ರವರಿ 06 ರಿಂದ 13, 2014ರವೆರೆಗೆ ಎಂಟು ದಿನಗಳ ಕಾಲ ನಡೆಯಲಿರುವ ಜನಪದ ನೃತ್ಯಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಸಿದ್ದಿ ಜನಾಂಗದ ವಿಶಿಷ್ಟ ನೃತ್ಯವು ಆ ಸಂಸ್ಕೃತಿಯ ಭಾಗವಾಗಿದೆ. ಸಿದ್ದಿ ಜನಾಂಗದ ನೃತ್ಯ ಸೇರಿದಂತೆ ಜನಪದ ಕಲೆಗಳು ಕಣ್ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಅವುಗಳನ್ನು ಕಲಿತುಕೊಳ್ಳುವುದು ಅತ್ಯಂತ ಅಗತ್ಯ ಎಂದರು. ಶ್ರದ್ಧೆ, ನಿಷ್ಠೆಯಿಂದ ಜನಪದ ಕಲೆಗಳನ್ನು ಕಲಿತುಕೊಂಡಾಗ ಮಾತ್ರ ವಿಶ್ವವಿದ್ಯಾಲಯವು ಆಯೋಜಿಸಿರುವ ಕಾರ್ಯಾಗಾರ ಸಾರ್ಥಕವಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಮಾತನಾಡಿ, ಸಿದ್ದಿ ಜನಾಂಗ ತಮ್ಮ ಕಲೆಗಳನ್ನು ಉಳಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಬುಡಕಟ್ಟು ಕಲೆ ಸೇರಿದಂತೆ ಜನಪದ ಕಲೆಗಳನ್ನು ಉಳಿಸಿಕೊಂಡರೆ ಮಾತ್ರ ನಾಡಿನ ಅನನ್ಯತೆ ಉಳಿದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಾನ್ಯ ಕುಲಸಚಿವ ಪ್ರೊ. ಡಿ.ಬಿ. ನಾಯಕ ಅವರು ಮಾತನಾಡಿ ಆಧುನಿಕತೆ, ಜಾಗತೀಕರಣ ಹಾಗೂ ಮಾಧ್ಯಮಗಳ ಪ್ರಭಾವದಿಂದ ಜನಪದ ಕಲೆಗಳು ಕಳೆದುಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕಲೆಗಳನ್ನು ಪರಿಷ್ಕರಿಸಿ ಸಮಕಾಲೀನಗೊಳಿಸಿದಾಗ ಮಾತ್ರ ಅವುಗಳು ಉಳಿಯುತ್ತವೆ ಎಂದು ತಿಳಿಸಿದರು.
ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕರೂ ಮತ್ತು ಮೌಲ್ಯಮಾಪನ ಕುಲಸಚಿವರು ಆದ ಪ್ರೊ. ಸ.ಚಿ. ರಮೇಶ ಮಾತನಾಡಿ, ಜನಪದ ಕಲೆಗಳನ್ನು ಯುವಜನಾಂಗಕ್ಕೆ ಕಲಿಸಿಕೊಡುವ ಮೂಲಕ ಕಲಾವಿದರನ್ನು ಹುಟ್ಟುಹಾಕುವ ಮುಖ್ಯ ಉದ್ದೇಶ ಜಾನಪದ ವಿಶ್ವವಿದ್ಯಾಲಯದ್ದಾಗಿದೆ ಎಂದು ಹೇಳಿದರು.

ಮಣಿಪುರದ ಖ್ಯಾತ ಮಣಿಪುರಿ ನೃತ್ಯ ಕಲಾವಿದರಾದ ಶ್ರೀ ವೈ. ವಿದ್ಯಾನಂದ ಸಿಂಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದರಾದ ಶ್ರೀ ಗಣಪ್ಪಗೌಡ ಅಭಿಪ್ರಾಯ ಹಂಚಿಕೊಂಡರು.
ಶ್ರೀ ಎನ್. ಮೋಹನಕುಮಾರ್ ಪ್ರಾರ್ಥಿಸಿದರು. ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಕುಮಾರಿ ಶ್ವೇತಾ ಎಂ.ಬಿ., ಸ್ವಾಗತಿಸಿದರು. ಶ್ರೀಮತಿ ಅಭಿನಯ ಎಚ್. ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ.ಎ. ವಿಭಾಗದ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಶ್ರೀ ಪ್ರಕಾಶ ಹೊಸಮನಿ ವಂದಿಸಿದರು.
ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಸಹಾಯಕ ಕಾರ್ಯಪಾಲಕ ಇಂಜಿನಿಯರರಾದ ಶ್ರೀ ಕೆ.ಎನ್. ಚಂದು, ಕಲಾವಿದರಾದ ಶ್ರೀ ಸಂತೋಷ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಜಾನಪದ ವಿ.ವಿ ಹೊಸ ತಾತ್ವಿಕ ಮಾದರಿಗಳನ್ನು ರೂಪಿಸಿಕೊಡಬೇಕು : ವಿದ್ವಾಂಸ ಡಾ. ರಾಗೌ ಅಭಿಮತ

ಉದ್ಘಾಟನಾ ಸಮಾರಂಭ :

ಗೊಟಗೋಡಿ/ ಶಿಗ್ಗಾವಿ : ಜಗತ್ತಿನ ಮೊಟ್ಟ ಮೊದಲ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಜಗತ್ತಿನ ಜಾನಪದ ಕ್ಷೇತ್ರಕ್ಕೆ ಹೊಸ ತಾತ್ವಿಕ ಮಾದರಿಗಳನ್ನು ರೂಪಿಸಿಕೊಡಬೇಕಾಗಿದದು ಅಗತ್ಯವಿದೆ ಎಂದು ಜಾನಪದ ವಿದ್ವಾಂಸ ಡಾ. ರಾಮೇಗೌಡ (ರಾಗೌ) ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ 2013, ನವ್ಹೆಂಬರ್ 18ರಂದು 'ಜಾನಪದ ಕ್ಷೇತ್ರಕ್ಕೆ ಡಾ. ರಾಗೌ ಅವರ ಕೊಡುಗೆ' ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಜಾನಪದ ಸಂದರ್ಭದಲ್ಲಿ 70ರ ದಶಕಅತ್ಯಂತ ಸಂಭ್ರಮದ ಕಾಲ. ಆ ಸಂದರ್ಭದಲ್ಲಿ ಜಾನಪದ ಅಧ್ಯಯನಕ್ಕೆ ಪ್ರವೇಶ ಪಡೆದ ನಮಗೆ ನಿಜವಾಗಿಯೂ ಸಂತೋಷವುಂಟು ಮಾಡಿತ್ತು ಎಂದು ತಿಳಿಸಿದ ಡಾ. ರಾಗೌ ಅವರು, ಹಳೆಯದು ಕಳೆದು ಹೋಗಿ ಹೊಸದು ಇನ್ನೂ ಸ್ಪಷ್ಟವಾಗಿ ರೂಪಗೊಳ್ಳದ ಈ ಹೊತ್ತಿನ ಸಂದಿಗ್ಧತೆಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಸಂಭ್ರಮಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯವು ಹೊಸ ತಾತ್ವಿಕತೆಯನ್ನು ಮತ್ತು ಸೈದ್ಧಾಂತಿಕ ಸ್ವರೂಪದ ಮಾದರಿಗಳನ್ನು ಕಟ್ಟಿಕೊಡಲಿದೆ ಎನ್ನುವ ಭರವಸೆ ನನಗಿದೆ ಎಂದು ತಿಳಿಸಿದರು.
ಮುಖ್ಯ ಅತಿಯಾಗಿ ಪಾಲ್ಗೊಂಡು ಮಾತನಾಡಿದ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ ಗೌಡ ಅವರು ಜನಪದ ಕಲೆ, ಕಲಾವಿದರನ್ನು ಮುಖ್ಯ ನೆಲೆಯಲ್ಲಿ ಗುರುತಿಸುವ, ಗೌರವಿಸುವ ಮೂಲಕ ಜಾನಪದ ವಿಶ್ವವಿದ್ಯಾಲಯವು ಮಹತ್ವದ ಕಾರ್ಯಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಂತರಶಿಸ್ತೀಯ ಹಾಗೂ ಬಹುಶಿಸ್ತೀಯ ನೆಲೆಯಲ್ಲಿ ಜಾನಪದ ವಿಷಯವನ್ನು ಹೇಗೆ ಅಧ್ಯಯನ ಮಾಡಬಹುದು ಎಂಬುದಕ್ಕೆ ಒಂದು ಬಗೆಯ ಮಾದರಿಯನ್ನು ಒದಗಿಸಿದ ನಾಡಿನ ವಿರಳ ವಿದ್ವಾಂಸರಲ್ಲಿ ಡಾ. ರಾಗೌ ಅವರು ಒಬ್ಬರು. ರಾಗೌ ಅವರು ಇನ್ನೂ ಕೈಗೊಳ್ಳಬೇಕಾದ ಜಾನಪದ ಕ್ಷೇತ್ರಸಂಬಂಧಿ ಕಾರ್ಯಗಳಿಗೆ ವಿಶ್ವವಿದ್ಯಾಲಯ ಅಗತ್ಯ ಸಹಕಾರ ನೀಡುವುದಾಗಿ ಕುಲಪತಿಯವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ರಾಗೌ ಹಾಗೂ ಪ್ರೊ. ಜಯಪ್ರಕಾಶ ಗೌಡ ಅವರನ್ನು ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಎನ್. ಮೋಹನಕುಮಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕುಲಸಚಿವ ಡಾ. ಡಿ.ಬಿ. ನಾಯಕ ಸ್ವಾಗತಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಕುಮಾರಿ ಎಂ.ಬಿ. ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಮರವಂತೆ ವಂದಿಸಿದರು.
ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ, ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಹಾಗೂ ಡೀನ್ ಪ್ರೊ. ಎಂ. ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀ ಕೆ.ಎನ್. ಚಂದು, ಶ್ರೀಮತಿ ಯಶೋಧರಾ ರಾಮೇಗೌಡ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್, ಪ್ರೊ. ಜಿ.ಟಿ. ವೀರಪ್ಪ, ಕೀಲಾರದ ಕೃಷ್ಣೇಗೌಡ, ಕೆ.ಆರ್. ರಮೇಶ, ಶಿವಲಿಂಗಯ್ಯ, ಸೋಮಶೇಖರ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಮಂಡ್ಯ ಜಿಲ್ಲೆಯ ಕೀಲಾರದ ಕ್ಷೀರಸಾಗರ ಮಿತ್ರಕೂಟ ತಂಡದಿಂದ ಆಕರ್ಷಕ ಪಟಾಕುಣಿತ ಪ್ರದರ್ಶನ ಜರುಗಿತು.


ವಿಚಾರ ಸಂಕಿರಣ :

ಗೊಟಗೋಡಿ/ಶಿಗ್ಗಾವಿ : ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ 2013, ನವ್ಹೆಂಬರ್ 18ರಂದು 'ಜಾನಪದ ಕ್ಷೇತ್ರಕ್ಕೆ ಡಾ. ರಾಗೌ ಅವರ ಕೊಡುಗೆ' ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು.
ಪಾಂಡವಪುರದ ಪ್ರಾಧ್ಯಾಪಕ ಡಾ. ಬೋರೇಗೌಡ ಚಿಕ್ಕಮರಳಿ ಅವರು 'ರಾಗೌ ಅವರ ಜಾನಪದ ತಾತ್ವಿಕ ಚಿಂತನೆಗಳು' ಕುರಿತು ವಿಶೇಷ ಉಪನ್ಯಾಸ ನೀಡಿ, ಜನಪದ ಕಥೆಗಳನ್ನು ಸಂಗ್ರಹಿಸಿ ಅವುಗಳ ಆಶಯದ ಆಧಾರದ ಮೇಲೆ ವರ್ಗೀಕರಣ, ವಿಶ್ಲೇಷಣೆ ಇತ್ಯಾದಿ ತಾತ್ವಿಕತೆಯನ್ನು, ವೈಜ್ಞಾನಿಕತೆಯನ್ನು ದೊರಕಿಸಿಕೊಟ್ಟ ನಾಡಿನ ಕೆಲವೇ ಕೆಲವು ವಿರಳ ತಜ್ಞರಲ್ಲಿ ರಾಗೌ ಅವರು ಒಬ್ಬರು ಎಂದು ತಿಳಿಸಿದರು. ತಮ್ಮ ಮಹತ್ವದ ಕೃತಿಗಳ ಮೂಲಕ ಸೈದ್ಧಾಂತಿಕ ಸ್ವರೂಪವನ್ನು ನಿರ್ಧರಿಸಿದ ರಾಗೌ ಅವರು ಜಾನಪದಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಭಾರತೀನಗರದ ಪ್ರಾಧ್ಯಾಪಕ ಡಾ. ಮ. ರಾಮಕೃಷ್ಣ ಅವರು 'ರಾಗೌ ಅವರ ಜಾನಪದ ಕ್ಷೇತ್ರಕಾರ್ಯ ಮತ್ತು ಸಂಗ್ರಹಗಳು' ವಿಷಯದ ಕುರಿತು ಮಾತನಾಡಿ, ಸಂಸ್ಕೃತಿ ಅಧ್ಯಯನಕ್ಕೆ ಮೂಲ ಆಕರಗಳೆನಿಸಿದ ಜನಪದರ ಜ್ಞಾನವನ್ನು ತಮ್ಮ ಅಪಾರವಾದ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ ಕನ್ನಡ ಜಾನಪದ ಕ್ಷೇತ್ರಕ್ಕೆ ಅನನ್ಯ ಸೇವೆಯನ್ನು ನೀಡಿದವರು ಡಾ. ರಾಮೇಗೌಡ ಅವರು ಎಂದು ತಿಳಿಸಿದರು.
'ಕನ್ನಡ ಜಾನಪದ ಸಂದರ್ಭ ಮತ್ತು ರಾಗೌ' ಎಂಬ ವಿಷಯ ಕುರಿತು ಮೈಸೂರಿನ ಪ್ರಾಧ್ಯಾಪಕ ಡಾ. ಪಿ. ಬೆಟ್ಟೇಗೌಡ ಅವರು ಮಾತನಾಡಿ, ಪಾಶ್ಚಾತ್ಯ ವಿದ್ವಾಂಸರಾದ ಫ್ಲೀಟ್ ಮತ್ತು ಕಿಟ್ಟೆಲ್ ಅವರು ಲಾವಣಿ ಮತ್ತು ಗಾದೆಗಳ ಸಂಗ್ರಹದ ಮೂಲಕ ಕನ್ನಡ ಜಾನಪದ ಕ್ಷೇತ್ರದ ಆರಂಭಿಕ ಬೆಳವಣಿಗೆಗೆ ಕಾರಣರಾದವರು. ಮುಂದೆ ಜಾನಪದ ಸಂಗ್ರಹದಂತಹ ಕೆಲಸ-ಕಾರ್ಯದಲ್ಲಿ ಅತ್ಯಂತ ಶ್ರಮ, ಶ್ರದ್ಧೆಯಿಂದ ತೊಡಗಿಸಿಕೊಂಡ ರಾಗೌ ಅವರು ಯುವ ವಿದ್ವಾಂಸರಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು ಎಂದು ತಿಳಿಸಿದರು.
ಜಾನಪದ ವಿದ್ವಾಂಸರಾದ ಡಾ. ರಾಮೇಗೌಡ, ಕುಲಸಚಿವ ಡಾ. ಡಿ.ಬಿ. ನಾಯಕ, ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ, ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಹಾಗೂ ಡೀನ್ ಪ್ರೊ. ಎಂ. ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀ ಕೆ.ಎನ್. ಚಂದು, ಶ್ರೀಮತಿ ಯಶೋಧರಾ ರಾಮೇಗೌಡ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್, ಪ್ರೊ. ಜಿ.ಟಿ. ವೀರಪ್ಪ, ಕೀಲಾರದ ಶ್ರೀ ಕೃಷ್ಣೇಗೌಡ, ಶ್ರೀ ಕೆ.ಆರ್. ರಮೇಶ, ಶ್ರೀ ಶಿವಲಿಂಗಯ್ಯ, ಶ್ರೀ ಸೋಮಶೇಖರ ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಗ್ರಾಮೀಣ ಸಮಷ್ಟಿ ಬದುಕಿನ ಅಭಿವ್ಯಕ್ತಿಯೇ ಆನಂದಕಂದರ ಕಾವ್ಯದ ಮೂಲದ್ರವ್ಯ : ಡಾ. ಶ್ರೀರಾಮ ಇಟ್ಟಣ್ಣವರ

ಗೊಟಗೋಡಿ/ ಶಿಗ್ಗಾವಿ : ಗ್ರಾಮೀಣ ಸಮಷ್ಟಿ ಬದುಕಿನ ಅಭಿವ್ಯಕ್ತಿಯೇ ಆನಂದಕಂದರ ಕಾವ್ಯದ ಮೂಲದ್ರವ್ಯ ಎಂದು ನಾಡಿನ ಖ್ಯಾತ ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರ ಮತ್ತು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಸೆಪ್ಟಂಬರ್ 18ರಂದು 'ಡಾ. ಬೆಟಗೇರಿ ಕೃಷ್ಣಶರ್ಮರ ಜನಪದ ಸಂಸ್ಕೃತಿ ಚಿಂತನೆಗಳು' ಕುರಿತು ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೌತಿಕ ಚಹರೆಗಳು ಮತ್ತು ಮಾನಸಿಕ ಸ್ಥಿತಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮ್ಯ ಸಂಸ್ಕೃತಿ ಸಂಪೂರ್ಣ ನಾಶವಾಗುತ್ತಿದೆ. ಆದರೆ ಗ್ರಾಮೀಣ ಸಂಸ್ಕೃತಿ ಮತ್ತು ಜನಪದರ ಸಮೃದ್ಧ ಜೀವನ ಶೈಲಿಯನ್ನು ಮತ್ತು ಭಾವುಕ ಜಗತ್ತನ್ನ ಅನಾವರಣ ಮಾಡಿದ ಆನಂದಕಂದರ ಸಮಗ್ರ ಸಾಹಿತ್ಯವನ್ನು ಕುರಿತು ಹೊಸ ಹೊಸ ಸಂಶೋಧನೆಗಳು ಆಗಬೇಕಾದುದು ಅಗತ್ಯ ಎಂದು ಪ್ರತಿಪಾದಿಸಿದರು.
ಖ್ಯಾತ ಹಿರಿಯ ಲೇಖಕಿ ಡಾ. ಶಾಂತಾ ಇಮ್ರಾಪುರ ಅವರು 'ಬೆಟಗೇರಿಯವರ ನಲ್ವಾಡುಗಳು' ವಿಷಯದ ಬಗ್ಗೆ ಮಾತನಾಡಿ, ದೇಸೀ ಬದುಕಿನ ಎಲ್ಲ ಸಂಗತಿಗಳು ವಿಸ್ಮೃತಿಗೆ ಸರಿಯುತ್ತಿರುವ ಈ ಹೊತ್ತಿನಲ್ಲಿ ಬೆಟಗೇರಿಯವರ ನಲ್ವಾಡುಗಳು ದೇಸೀ ಸಾಂಸ್ಕೃತಿಕ ಸಂಕಥನ ಎಂದು ಬಣ್ಣಿಸಿದರು.
'ಬೆಟಗೇರಿಯವರ ಜನಪದ ಸಂಸ್ಕೃತಿ ಚಿಂತನೆಗಳು' ವಿಷಯದ ಕುರಿತು ಮಾತನಾಡಿದ ಖ್ಯಾತ ಜಾನಪದ ತಜ್ಞ ಡಾ. ಸಿ.ಕೆ. ನಾವಲಗಿ ಅವರು, ಜನಪದ ಸಂಸ್ಕೃತಿಯಿಂದ ಪ್ರೇರಣೆಗೊಂಡ ಆನಂದಕಂದರು ಬೇಂದ್ರೆಯವರಿಗಿಂತ ಮೊದಲೇ ಜಾನಪದ ಶೈಲಿಯನ್ನು ಸಮರ್ಥವಾಗಿ ಕಾವ್ಯದಲ್ಲಿ ಬಳಸಿಕೊಂಡದ್ದು ಅತ್ಯಂತ ಮಹತ್ವದ ಸಂಗತಿ ಎಂದು ತಿಳಿಸಿದರು. ಅಲ್ಲದೇ ಅವರ ಜನಪದ ಸಂಸ್ಕೃತಿ ಚಿಂತನೆಗಳು ಪುನರ್ ಶೋಧಕ್ಕೆ ಒಳಪಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಹಾವೇರಿ ಶಿವಲಿಂಗೇಶ್ವರ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಸವಿತಾ ಹಿರೇಮಠ ವೇದಿಕೆ ಮೇಲಿದ್ದರು.
ಯೋಜನಾ ಸಹಾಯಕ ಸಂಗಮೇಶ ಎಸ್. ಗಣಿ ಸ್ವಾಗತಿಸಿ, ಪರಿಚಯಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕ ಡಾ. ವೃಷಭಕುಮಾರ ವಂದಿಸಿದರು.
ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ. ಎಂ. ಚಂದ್ರ ಪೂಜಾರಿ, ಖ್ಯಾತ ಸಾಹಿತಿಗಳಾದ ಡಾ. ಸೋಮಶೇಖರ ಇಮ್ರಾಪುರ, ಸತೀಶ ಕುಲಕರ್ಣಿ, ಗಂಗಾಧರ ನಂದಿ, ಡಾ. ಶ್ರೀಶೈಲ ಹುದ್ದಾರ, ಡಾ. ರಾಮು ಮೂಲಗಿ, ಶ್ರೀಮತಿ ಸಂಕಮ್ಮ ಸಂಕಣ್ಣವರ, ಖ್ಯಾತ ಕಲಾವಿದ ಕರಿಯಪ್ಪ ಹಂಚಿನಮನಿ ಮತ್ತಿತರರು ಉಪಸ್ಥಿತರಿದ್ದರು.

ಆನಂದಕಂದರ ಸಮಗ್ರ ಸಾಹಿತ್ಯದ ವಿಸ್ತೃತ ಅಧ್ಯಯನದ ಅಗತ್ಯತೆ ಇದೆ : ಪ್ರೊ. ರಾಘವೇಂದ್ರ ಪಾಟೀಲ

ಗೊಟಗೋಡಿ/ ಶಿಗ್ಗಾವಿ : ಜನಪದರ ಭಾಷೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡ ಡಾ. ಬೆಟಗೇರಿ ಕೃಷ್ಣಶರ್ಮರ ಒಟ್ಟು ಸಾಹಿತ್ಯದ ಕುರಿತು ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಾದ ಅಗತ್ಯತೆ ಇದೆ ಎಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರ ಮತ್ತು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಸೆಪ್ಟಂಬರ್ 18ರಂದು 'ಡಾ. ಬೆಟಗೇರಿ ಕೃಷ್ಣಶರ್ಮರ ಜನಪದ ಸಂಸ್ಕೃತಿ ಚಿಂತನೆಗಳು' ಕುರಿತು ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದರ ಭಾಷಿಕ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡು ನಾಡಿನ ಜನಮಾನಸಕ್ಕೆ ಚಿರಪರಿಚಿತರಾದ ಆನಂದಕಂದರ ಒಟ್ಟು ಸಾಹಿತ್ಯವನ್ನು ಕುರಿತು ಗಂಭೀರವಾದ ಅಧ್ಯಯನಗಳು ನಡೆಯದಿರುವುದು ವಿಷಾದನೀಯ ಎಂದ ಅವರು, ಸೃಜನಶೀಲ ಪ್ರತಿಭಾನ್ವಿತ ಸಾಹಿತಿ ಬೆಟಗೇರಿ ಕೃಷ್ಣಶರ್ಮರ ಜನಪದ ಸಂಸ್ಕೃತಿ ಚಿಂತನೆಗಳ ಬಗ್ಗೆ ಜಾನಪದ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣ ನಡೆಯುತ್ತಿರುವುದು ಔಚಿತ್ಯಪೂರ್ಣ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅವರು, ಜನಪದ ಜೀವನ ಮತ್ತು ನಾಡಿನ ಸಾಂಸ್ಕೃತಿಕ ಪರಿಚಾರಕರಾಗಿ ಕಾರ್ಯಮಾಡಿದ ಡಾ. ಬೆಟಗೇರಿ ಕೃಷ್ಣಶರ್ಮರ ಸಾಹಿತ್ಯ ಸೇವೆ ಅನುಮಪವಾದುದು. ಅವರ ಸಮಗ್ರ ಸಾಹಿತ್ಯದ ಕುರಿತು ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನಗಳನ್ನು ಕೈಗೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಹಿರಿಯ ಸಾಹಿತಿ ಡಾ. ಚಂದ್ರಶೇಖರ ವಸ್ತ್ರದ ಪ್ರಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಿ.ಬಿ. ನಾಯಕ ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ. ಎಂ. ಚಂದ್ರ ಪೂಜಾರಿ, ಖ್ಯಾತ ಸಾಹಿತಿಗಳಾದ ಡಾ. ಸೋಮಶೇಖರ ಇಮ್ರಾಪುರ, ಸತೀಶ ಕುಲಕರ್ಣಿ, ಗಂಗಾಧರ ನಂದಿ, ಡಾ. ಶ್ರೀಶೈಲ ಹುದ್ದಾರ, ಡಾ. ರಾಮು ಮೂಲಗಿ, ಶ್ರೀಮತಿ ಸಂಕಮ್ಮ ಸಂಕಣ್ಣವರ, ಖ್ಯಾತ ಕಲಾವಿದ ಕರಿಯಪ್ಪ ಹಂಚಿನಮನಿ ಮತ್ತಿತರರು ಉಪಸ್ಥಿತರಿದ್ದರು.
ವರ್ಷಾ ಸುರೇಶ ಮತ್ತು ವಿದ್ಯಾಮೂರ್ತಿ ಪ್ರಾರ್ಥಿಸಿದರು. ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಸ್ವಾಗತಿಸಿದರು. ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ ವಂದಿಸಿದರು. ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿ ಕುಮಾರಿ ಶ್ವೇತಾ ಎಂ.ಬಿ. ಕಾರ್ಯಕ್ರಮ ನಿರೂಪಿಸಿದರು.

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India