ಪ್ರಕಟಣೆಗಳು > ವಾರ್ತಾಪತ್ರ
 

ಹಣತೆ ಸಂಚಿಕೆಗಳು

ಹಣತೆ : ಸಂಪುಟ 1 ಸಂಚಿಕೆ 1 ಆಗಸ್ಟ್ 22, 2012 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 1 ಸಂಚಿಕೆ 2 ನವೆಂಬರ್ 22, 2012 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 2 ಸಂಚಿಕೆ 1 ಫೆಬ್ರವರಿ 22, 2013 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 2 ಸಂಚಿಕೆ 2 ಜೂನ್ 2013 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 2 ಸಂಚಿಕೆ 3 ಸೆಪ್ಟೆಂಬರ್ 2013 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 2 ಸಂಚಿಕೆ 4 ಡಿಸೆಂಬರ್ 2013 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 3 ಸಂಚಿಕೆ 1 ಮಾರ್ಚ್ 2014 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 3 ಸಂಚಿಕೆ 2 ಜೂನ್ 2014 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ

ಹಣತೆ : ಸಂಪುಟ 3 ಸಂಚಿಕೆ 3 ಜುಲೈ- ಸೆಪ್ಟೆಂಬರ್ 2014 ರ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ


ಹಣತೆ
ಬದುಕುವ ಸಮುದಾಯಗಳಿಗೆಲ್ಲಾ ಒಂದೊಂದು ಸಂಸ್ಕೃತಿ ಇದೆ. ಮೂಲತಃ ಪ್ರತಿ ಸಮುದಾಯಕ್ಕೂ ತನ್ನ ಸಂಸ್ಕೃತಿ ಕುರಿತು ಹೆಮ್ಮೆ ಅಭಿಮಾನ ಇದ್ದೇ ಇರುತ್ತದೆ. ಇನ್ನೊಂದು ಸಮುದಾಯದ ಜೊತೆ ಮುಖಾಮುಖಿಯಾದಾಗ ಆ ಸಮುದಾಯಗಳು ಪರಸ್ಪರ ಗೌರವಾದರಗಳಿಂದ ಒಂದನ್ನೊಂದು ಸ್ವೀಕರಿಸುವ ಮನೋಭಾವ ಇದ್ದಲ್ಲಿ ಅದು ಪರಸ್ಪರ ಅಭಿವೃದ್ಧಿಗೂ ಕಾರಣವಾಗುತ್ತದೆ. ಜಾಗತೀಕರಣದ ನೆಲೆಗಟ್ಟಿನಲ್ಲಿ ವಿಶ್ವದ ಸಮುದಾಯಗಳೆಲ್ಲಾ ಒಂದೇ ವೇದಿಕೆಯಲ್ಲಿ ಪೈಪೋಟಿಗೆ ಇಳಿಯುತ್ತಿವೆ. ತಾನು ಹೆಚ್ಚು ಎಂಬುದಕ್ಕಿಂತ ತನ್ನಲ್ಲಿರುವ ಉಪಯುಕ್ತತೆ ಎಷ್ಟು ಎಂದು ಸ್ಪಷ್ಟಪಡಿಸುವ ತಾಂತ್ರಿಕ ಕೌಶಲ್ಯಕ್ಕೆ ಇಂದು ಹೆಚ್ಚಿನ ಮಾನ್ಯತೆ ದೊರಕುತ್ತಿದೆ. ಹೀಗಾಗಿ ಪ್ರತಿ ಸಮುದಾಯವೂ ತನ್ನಲ್ಲಿರುವ ಪಾರಂಪರಿಕ ಜ್ಞಾನ ಜಗತ್ತಿನ ಸಾರವನ್ನು ತಾನೇ ಅರ್ಥಮಾಡಿಕೊಳ್ಳುವ ದಿಕ್ಕಿನಲ್ಲಿ ಹೆಜ್ಜೆ ಇಡಲಾರಂಭಿಸಿದೆ. ಅದೇ ಜಾನಪದದ ಶೋಧನೆ. ಇಂದಿನ ಜಾಗತೀಕರಣ ಹಾಗೂ ಅದಕ್ಕೆ ಪೂರ್ವಭಾವಿಯಾಗಿ ವಿಶ್ವವನ್ನು ವ್ಯಾಪಿಸಿಕೊಂಡ ಕೈಗಾರಿಕೀಕರಣ ಗ್ರಾಮಸಂಸ್ಕೃತಿಯನ್ನು ಬದಿಗೊತ್ತಿ ನಗರ ಸಂಸ್ಕೃತಿ ಹಾಗೂ ಏಕಮುಖ ಗ್ರಾಹಕ ಮಾರುಕಟ್ಟೆ ನಿರ್ಮಾಣಕ್ಕೆ ಆದ್ಯತೆ ನೀಡಿವೆ. ಮಹಾಪ್ರವಾಹದಂತೆ ಹರಿದು ಬರುತ್ತಿರುವ ಜಾಗತೀಕರಣದ ಪರಿಣಾಮಗಳಲ್ಲಿ ಗ್ರಾಮೀಣ ಜನರಿಗೆ ಒದಗುವ ಅನುಕೂಲಕ್ಕಿಂತ ದುಷ್ಪರಿಣಾಮಗಳೇ ಹೆಚ್ಚು ಎಂಬುದು ನಿಧಾನವಾಗಿ ನಮ್ಮ ವಿಚಾರವಂತರು ಅರ್ಥಮಾಡಿಕೊಳ್ಳತೊಡಗಿದ್ದು ಜಾನಪದವು ಈ ಜಾಗತೀಕರಣದ ಪರಿಣಾಮಕ್ಕೆ ಸೂಕ್ತ ರೀತಿಯಲ್ಲಿ ಮುಖಾಮುಖಿಯಾಗಿ ನಿಲ್ಲುವುದೇ ಎಂದು ಕಾತರದಿಂದ ಕಾಯುತ್ತಿದ್ದಾರೆ. ಅಂತಹ ಹೋರಾಟದ ಮುನ್ಸೂಚನೆ ಹಾಗೂ ಅದರಿಂದ ಆಗುವ ಅದ್ಭುತ ಪರಿಣಾಮಗಳ ನಿರೀಕ್ಷೆಯಲ್ಲಿರುವವರು ಅಗತ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಜಾನಪದಕ್ಕಿರುವ ಅಂತಃಸ್ಸತ್ವ ಮತ್ತು ಆಂತರಿಕವಾಗಿ ಮೈದುಂಬಿಕೊಂಡಿರುವ ಶಕ್ತಿ. ಜಾನಪದ ಎಂದೂ ಆಧುನೀಕರಣಕ್ಕೆ, ಕೈಗಾರಿಕೀಕರಣಕ್ಕೆ, ಜಾಗತೀಕರಣಕ್ಕೆ ಪ್ರತಿರೋಧವೊಡ್ಡಿ ಅದನ್ನು ಹೊಸಕಿ ಹಾಕಿಬಿಡುವುದಿಲ್ಲ. ಅಂದ ಮಾತ್ರಕ್ಕೆ ಅದೆಲ್ಲದರ ಪರಿಣಾಮಕ್ಕೆ ಪಕ್ಕಾಗಿ ತನ್ನತನವನ್ನೇ ಕಳೆದುಕೊಳ್ಳುತ್ತಾ ನಿಸ್ತೇಜವಾಗುವುದೂ ಇಲ್ಲ. ವಿದ್ಯುತ್ ಚಾಲಿತ ಯಂತ್ರದಿಂದ ಕೆಲಸ ಮಾಡುವ ಫ್ಲೋರ್ ಮಿಲ್ ವಿದ್ಯುತ್ ಕೊರತೆಯಿಂದ ನಿಂತುಬಿಟ್ಟಿತು ಎಂದರೆ ಮರುಕ್ಷಣವೇ ಕೇವಲ ರಟ್ಟೆಯ ಬಲವನ್ನೇ ನಂಬಿ ಸುತ್ತುವ ಬೀಸುವ ಕಲ್ಲು ತನ್ನ ನಿರಂತರ ಸೇವೆ ಆರಂಭಿಸಿಬಿಡುತ್ತದೆ. ಕಾಸಿನ ಕೊರತೆ ಕಾಡದಂತೆ ಹೊತ್ತಿಗೊಂದಿಷ್ಟು ಕೂಳು, ಖಾಯಿಲೆಗೊಂದಿಷ್ಟು ಮದ್ದು ಜಾನಪದದಲ್ಲಿ ಸದಾ ಲಭ್ಯ. ಆದ್ದರಿಂದಲೇ ಅದರ ಒಡಲಲ್ಲಿ ಅಡಗಿರುವ ಜ್ಞಾನದ ಶೋಧ ಅತಿಮುಖ್ಯ. ಸಂಸ್ಕೃತಿಯ ಹಿರಿಮೆ ಅರಿಯುವ ಮೂಲಕ ಸಮುದಾಯಗಳ ನಡುವಿನ ಸಾಮರಸ್ಯ ಹೆಚ್ಚುತ್ತದೆ. ಪ್ರಖರವಾಗಿ ಬೆಳಗುವ ವಿದ್ಯುತ್ ದೀಪಕ್ಕೆ ಸಂವಾದಿಯಾಗಿ ಏನನ್ನೋ ಒದಗಿಸಿಬಿಡುತ್ತೇನೆ ಎಂಬ ಹುಂಬ ಹೋರಾಟಕ್ಕೆ ಜಾನಪದ ಇಳಿಯುವುದಿಲ್ಲ. ಬದಲಾಗಿ ಪ್ರಖರ ವಿದ್ಯುತ್ ಕೈಕೊಟ್ಟಾಗ ಜಗವೆಲ್ಲ ಕತ್ತಲಿನಲ್ಲಿ ಮುಳುಗಿದಾಗ ಯಾವ ಗಾಬರಿಗೂ ಆಸ್ಪದವಿಲ್ಲದಂತೆ ಬೆಳಗುವ ಹಣತೆ ಸುತ್ತಲಿನ ಕತ್ತಲನ್ನು ಒದ್ದೋಡಿಸುತ್ತದೆ. ಇವೆಲ್ಲಕ್ಕೆ ಇಂಬು ನೀಡುವ ಸಲುವಾಗಿ ಜನಪದರ ಸೊಬಗಿನ ಸಂಸ್ಕೃತಿಯ ಅಂತಃಶಕ್ತಿ ಅರಿಯುವ ಜಾನಪದ ಸಂಶೋಧನೆ, ಶಿಕ್ಷಣ ಹಾಗೂ ಅಭಿವೃದ್ಧಿಯ ಕನಸುಗಳನ್ನು ಹೊತ್ತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ತನ್ನ ಆಂತರ್ಯದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಹಾಗೂ ಸಮಾಜಮುಖಿ ಕಾರ್ಯಗಳ ಮುಖವಾಣಿಯಾಗಿ ಹೊರಬರುತ್ತಿರುವ ಈ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಾರ್ತಾ ಪತ್ರಕ್ಕೆ 'ಹಣತೆ' ಎಂಬ ಹೆಸರನ್ನು ಜನಪದರ ಅಂತಃಸ್ಸತ್ವ ಹಾಗೂ ಜ್ಞಾನದ ಸಂಕೇತವಾಗಿ ಆರಿಸಿಕೊಂಡಿದ್ದೇವೆ. ವಿಶ್ವವಿದ್ಯಾಲಯದ ಒಳಗಿನ ಚಟುವಟಿಕೆಗಳನ್ನು ಹೊರಜಗತ್ತಿನ ಆತ್ಮೀಯರಿಗೆ ಪ್ರತಿಫಲಿಸಿ ತೋರಿಸುವ ದರ್ಪಣವಾಗಿ ಈ ವಾರ್ತಾಪತ್ರ ಯಶಸ್ವಿಯಾಗಿ ಸಾಫಲ್ಯತೆ ಪಡೆಯುತ್ತದೆ ಎಂದು ಆಶಿಸುತ್ತೇವೆ. ಮುಕ್ಕೋಟಿ ದೇವರನ್ನು ಸದಾ ನೆನೆಯುತ್ತ ತಮ್ಮ ದೈನಂದಿನ ನೋವು ನಲಿವುಗಳನ್ನು ಮರೆಯುತ್ತ ದೇಶದ ಸಂಸ್ಕೃತಿಯ ಹಿರಿಮೆ ಹೆಚ್ಚಿಸುತ್ತಿರುವ ಕರ್ನಾಟಕದ ಜನಪದರ ಪದತಳದಲ್ಲಿ ವಂದಿಸುತ್ತ ಜನಪದ ಕಲೆಗಾಗಿ ಜೀವ ತೇಯುವವರಿಗೆ ಈ ಮೊದಲ ಆವೃತ್ತಿಯನ್ನು ಅರ್ಪಿಸುತ್ತಿದ್ದೇವೆ.

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India